×
Ad

ನಕ್ಷತ್ರ ಪುಂಜದ ಅದ್ಭುತ ಚಿತ್ರ ಸೆರೆಹಿಡಿದ ನಾಸಾದ ಟೆಲಿಸ್ಕೋಪ್

Update: 2022-05-10 23:15 IST

ವಾಷಿಂಗ್ಟನ್, ಮೇ 10: ನಾಸಾದ ನೂತನ ಜೇಮ್ಸ್‌ವೆಬ್  ಬಾಹ್ಯಾಕಾಶ ಟೆಲಿಸ್ಕೋಪ್ (ದೂರದರ್ಶಕ)ವು ನಕ್ಷತ್ರಪುಂಜದ ಅದ್ಭುತ ಚಿತ್ರವನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಟ್ವೀಟ್ ಮಾಡಿದೆ. 

ಈಗ ನಾಸದ ಬಾಹ್ಯಾಕಾಶ ಟೆಲಿಸ್ಕೋಪ್ ಆಗಿರುವ ಹಬಲ್ ನ ಸ್ಥಾನ ತುಂಬಲಿರುವ ಜೇಮ್ಸ್‌ವೆಬ್  ಟೆಲಿಸ್ಕೋಪ್ ನ ಪರೀಕ್ಷಾರ್ಥ ಪ್ರಯೋಗದ ಸಂದರ್ಭ ನಕ್ಷತ್ರಪುಂಜದ ಕ್ಷೀರಪಥಧ ಅಮೋಘ ಚಿತ್ರ ಸೆರೆಯಾಗಿದೆ ಎಂದು ನಾಸಾ ಚಿತ್ರ ಸಹಿತ ಟ್ವೀಟ್ ಮಾಡಿದೆ. ಅಸ್ಪಷ್ಟವಾದ ಚಿತ್ರ ತೀಕ್ಷ್ಣಗೊಳ್ಳುತ್ತಾ ಸಾಗುವುದು ಹಾಗೂ ಮಿನುಗುವ ನಕ್ಷತ್ರಗಳಂತಹ ಗುಂಪುಗಳನ್ನು ಈ ಚಿತ್ರ ತೋರಿಸಿದೆ. ಈ ಹಿಂದೆ ನಾಸಾದ ವೀಕ್ಷಣಾಲಯ ಸೆರೆಹಿಡಿದ ಚಿತ್ರಕ್ಕೆ ಹೋಲಿಸಿದರೆ ಈಗಿನ ಚಿತ್ರ ಅತ್ಯದ್ಭುತವಾಗಿದೆ. ವೆಬ್ ಟೆಲಿಸ್ಕೋಪ್ ದೊಡ್ಡ ಪ್ರಾಥಮಿಕ ಕನ್ನಡಿ ಮತ್ತು ಅತಿಕೆಂಪು ಆಕಾಶವನ್ನು ಇನ್ನಷ್ಟು ಸ್ಪಷ್ಟತೆಯೊಂದಿಗೆ ವೀಕ್ಷಿಸಲು ಸುಧಾರಿತ ಶೋಧಕಗಳನ್ನು ಹೊಂದಿದೆ. 

ಸೋಮವಾರ ಪೋಸ್ಟ್ ಮಾಡಿರುವ ಈ ಚಿತ್ರ ಇದುವರೆಗೆ 8,300 ಲೈಕ್ಸ್‌ಗಳನ್ನು ಪಡೆದಿದೆ. 2022ರ ಜೂನ್ ನಲ್ಲಿ ನಿಗದಿಯಾದ ನಾಸಾದ ಮಹಾತ್ವಾಕಾಂಕ್ಷೆಯ ಖಗೋಳ ಭೌತಶಾಸ್ತ್ರ ಬಾಹ್ಯಾಕಾಶ ಯೋಜನೆಯಲ್ಲಿ ಜೇಮ್ಸ್‌ವೆಬ್ ಟೆಲಿಸ್ಕೋಪ್ ಪ್ರಮುಖ ಪಾತ್ರ ವಹಿಸಲಿದೆ. ಈ ದೂರದರ್ಶಕವು ಅವರೋಹಿತ ಖಗೋಳ ಬಾಹ್ಯಾಕಾಶ ದೂರದರ್ಶಕವಾಗಿದ್ದು ದೂರದಲ್ಲಿರುವ, ಅಸ್ಪಷ್ಟ ಚಿತ್ರಗಳನ್ನು ಸ್ಪಷ್ಟವಾಗಿ, ನಿಖರವಾಗಿ ಗೋಚರಿಸುವ ವ್ಯವಸ್ಥೆ ಹೊಂದಿದೆ. ಇದು  18 ಷಡ್ಬುಜಾಕೃತಿಯ ಚಿನ್ನದ ಲೇಪಿತ ಬೆರಿಲಿಯಮ್ ಕನ್ನಡಿಗಳ ಭಾಗಗಳು ಸೇರಿ 21 ಅಡಿ ವ್ಯಾಸದ ಕನ್ನಡಿಯಾಗಿ ರೂಪುಗೊಂಡಿದ್ದರೆ, ಈಗ ಬಳಕೆಯಲ್ಲಿರುವ ಹಬಲ್ ದೂರದರ್ಶಕದ ಕನ್ನಡಿ 7.9 ಅಡಿ ವ್ಯಾಸವಿದೆ. ಜೇಮ್ಸ್‌ವೆಬ್ ಟೆಲಿಸ್ಕೋಪ್ 25 ಚದರ ಮೀಟರ್ ವ್ಯಾಪ್ತಿಯ ಬೆಳಕನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಇದು ಹಬಲ್ ನ ಸಾಮರ್ಥ್ಯಕ್ಕಿಂತ 6 ಪಟ್ಟು ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News