ದೇಶದ್ರೋಹ ಕಾನೂನು: ನೆಹರೂಗೆ ಮಾಡಲಾಗದ್ದನ್ನು ನಾವು ಮಾಡುತ್ತಿದ್ದೇವೆ ಎಂದು ಸುಪ್ರೀಂಕೋರ್ಟ್ ಗೆ ಹೇಳಿದ ಕೇಂದ್ರ

Update: 2022-05-11 05:59 GMT

ಹೊಸದಿಲ್ಲಿ: ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಮಂಗಳವಾರ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಉಲ್ಲೇಖ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ತಮ್ಮ ವಾದ ಮಂಡಿಸುತ್ತಾ "ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನು ಅಗತ್ಯವಿಲ್ಲ ಅದನ್ನು ರದ್ದಪಡಿಸಿದಷ್ಟೂ ಬೇಗ ಒಳ್ಳೆಯದು ಎಂದು ಪಂಡಿತ್ ಜವಾಹರಲಾಲ್ ನೆಹರೂ ಹೇಳಿದ್ದರು,'' ಎಂದರು.

ಆಗ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿ "ನೆಹರೂ ಅವರಿಗೆ ಮಾಡಲು ಅಸಾಧ್ಯವಾಗಿದ್ದನ್ನು ಈಗಿನ ಸರಕಾರ  ಮಾಡುತ್ತಿದೆ. ನಾವು ಮಾಡಲು ಪ್ರಯತ್ನಿಸುತ್ತಿದ್ದೇವೆ, ಪಂಡಿತ್ ನೆಹರೂ ಅವರಿಗೆ ಆಗ ಮಾಡಲು ಸಾಧ್ಯವಾಗಿರಲಿಲ್ಲ,'' ಎಂದರು.

ಈ ವಾದವನ್ನು ಒಪ್ಪದ ಕಪಿಲ್ ಸಿಬಲ್ "ಇಲ್ಲ ನೀವು ಹಾಗೆ ಮಾಡುತ್ತಿಲ್ಲ, ನೀವು ಕಾನೂನನ್ನು ಬೆಂಬಲಿಸುತ್ತಿದ್ದೀರಿ, ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿದ್ದೀರಿ ಶ್ರೀ ಮೆಹ್ತಾ,'' ಎಂದರು.

ನಂತರ ಮಹಾತ್ಮ ಗಾಂಧಿಯನ್ನು ಉಲ್ಲೇಖಿಸಿದ ಸಿಬಲ್, "ಮಮತೆಯನ್ನು ಉತ್ಪಾದಿಸಲು ಸಾಧ್ಯವಿಲ್ಲ, ಅದೇ ಸಮಯ ಮಮತೆಯಿಲ್ಲದೇ ಇರುವುದನ್ನು ಹಿಂಸೆಗೆ ಪ್ರೇರೇಪಣೆ ನೀಡದೇ ಇರುವ ರೀತಿಯಲ್ಲಿ ಅಭಿವ್ಯಕ್ತಿಪಡಿಸಲು ಮನುಷ್ಯನಿಗೆ ಸ್ವಾತಂತ್ರ್ಯ ಬೇಕು,'' ಎಂದರು.

ದೇಶದ್ರೋಹದ ಕಾನೂನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಸುಪ್ರೀಂ ಕೋರ್ಟಿಗೆ ಹೇಳಿದ ಕೆಲವೇ ದಿನಗಳಲ್ಲಿ ತನ್ನ ನಿಲುವು ಬದಲಾಯಿಸಿ ಮಂಗಳವಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದ ಕೇಂದ್ರ ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನನ್ನು ಮರುಪರಿಶೀಲಿಸಲು ನಿರ್ಧರಿಸಿರುವುದಾಗಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News