"ಪ್ರಧಾನಿ ಅಮಿತ್ ಶಾ'' ಎಂದ ಅಸ್ಸಾಂ ಮುಖ್ಯಮಂತ್ರಿ; ಇದೇನು ಬಾಯ್ತಪ್ಪಿ ಹೇಳಿದ ಮಾತಲ್ಲ ಎಂದ ಕಾಂಗ್ರೆಸ್

Update: 2022-05-11 06:08 GMT
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (PTI)

ಗುವಹಾಟಿ: ಅಸ್ಸಾಂನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಬಾಯ್ತಪ್ಪಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 'ಪ್ರಧಾನ ಮಂತ್ರಿ' ಎಂದು ಹೇಳಿರುವುದು ವಿಪಕ್ಷ ಕಾಂಗ್ರೆಸ್‍ಗೆ ಬಿಜೆಪಿಯನ್ನು ಟೀಕಿಸಲು ಒದು ಅಸ್ತ್ರವೊದಗಿಸಿದೆ.

ನೂರಾರು ಮಂದಿ ಭಾಗವಹಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಅಸ್ಸಾಮಿ ಭಾಷೆಯಲ್ಲಿ ಭಾಷಣ ಮಾಡಿದ ವೇಳೆ ಶರ್ಮ ಅವರು "ಪ್ರಧಾನಿ ಅಮಿತ್ ಶಾ ಮತ್ತು ಗೃಹ ಸಚಿವ ನರೇಂದ್ರ ಮೋದಿ'' ಎಂದು ಹೇಳಿದ್ದರು.

ಅಸ್ಸಾಂ ಕಾಂಗ್ರೆಸ್ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಈ ಕುರಿತು  ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಅಮಿತ್ ಶಾ ಅವರನ್ನು "ಪ್ರಧಾನಿ'' ಎಂದು ಸಂಬೋಧಿಸಿದ್ದಾರೆ ಎಂದಿದೆಯಲ್ಲದೆ  ಸರ್ಬಾನಂದ ಸೋನೋವಾಲ್ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಸಂಸದರೊಬ್ಬರು ಹಿಮಂತ ಬಿಸ್ವ ಶರ್ಮ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದನ್ನೂ ನೆನಪಿಸಿಕೊಂಡಿದೆ. ಆಗ ಶರ್ಮ ಅವರು ಸಚಿವರಾಗಿದ್ದರು,.

"ಸರ್ಬಾನಂದ ಸೋನೋವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ತೇಜ್ಪುರ್ ಸಂಸದ ಪಲ್ಲಬ್ ಲೋಚನ್ ದಾಸ್ ಅವರು ಹಲವು ಸಂದರ್ಭಗಳಲ್ಲಿ ಸಚಿವ ಹಿಮಂತ ಬಿಸ್ವ ಶರ್ಮ ಅವರನ್ನು ಸಾರ್ವಜನಿಕವಾಗಿ ಅಸ್ಸಾಂ ಮುಖ್ಯಮಂತ್ರಿ ಎಂದಿದ್ದರು. ಹಾಲಿ ಮುಖ್ಯಮಂತ್ರಿ ದಾಸ್ ಅವರನ್ನು ಅನುಸರಿಸುತ್ತಿದ್ದಾರೆಯೇ? ಬಿಜೆಪಿ ತನ್ನ ಮುಂದಿನ ಪ್ರಧಾನಿಯ ಬಗ್ಗೆ ನಿರ್ಧಾರ ಕೈಗೊಂಡಿದೆಯೇ?,'' ಎಂದು ಕಾಂಗ್ರೆಸ್ ತನ್ನ ಫೇಸ್ಬುಕ್ ಪುಟದಲ್ಲಿ ಪ್ರಶ್ನಿಸಿದೆ.

"ಅಥವಾ ನರೇಂದ್ರ ಮೋದಿ ಅವರ ಸ್ಥಾನದಲ್ಲಿ ಅಮಿತ್ ಶಾ ಅವರನ್ನು ಕೂರಿಸಲು ಅಭಿಯಾನ ಆರಂಭಗೊಂಡಿದೆಯೇ? ಹಿಮಂತ ಬಿಸ್ವ ಶರ್ಮ ಅವರು ಬಾಯ್ತಪ್ಪಿ ಆ ಮಾತುಗಳನ್ನು ಹೇಳಿಲ್ಲ,'' ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News