ಹೆಬ್ರಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷರಾಗಿ ಸಾಹಿತಿ ಡಾ. ಶ್ರೀನಿವಾಸ ಶೆಟ್ಟಿ ಸೋಮೇಶ್ವರ ಆಯ್ಕೆ

Update: 2022-05-11 06:11 GMT
ಡಾ. ಶ್ರೀನಿವಾಸ ಶೆಟ್ಟಿ 

ಹೆಬ್ರಿ : ಹೊಸಸಂಜೆ ಪ್ರಕಾಶನ ಕಾರ್ಕಳ ಆಯೋಜನೆಯಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್‌ ಟ್ರಸ್ಟ್‌ ಹೆಬ್ರಿ,  ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಶ್ರೀ ರಾಮ ಮಂದಿರ ಹೆಬ್ರಿ, ಶ್ರೀ ಗುರುರಕ್ಷಾ ಚಾರಿಟೇಬಲ್‌ ಟ್ರಸ್ಟ್‌ ಮುದ್ರಾಡಿ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಹೆಬ್ರಿ ತಾಲ್ಲೂಕು ಘಟಕ ಮತ್ತು ಶಾಂತಿ ನಿಕೇತನ ಯುವ ವೃಂದ ಕುಚ್ಚೂರು ಕುಡಿಬೈಲು ಇದರ ಸಹಯೋಗದಲ್ಲಿ  ಮೇ 15ರಂದು ಬೆಳಿಗ್ಗೆ 9ರಿಂದ ಸಂಜೆ 5.15ರ ತನಕ ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ನಡೆಯುವ ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ - ೨೦೨೨ರ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಎಸ್.‌ ಶ್ರೀನಿವಾಸ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನದ ಆಯೋಜಕರಾದ ಆರ್.‌ ದೇವರಾಯ ಪ್ರಭು ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರ ಪರಿಚಯ: ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಅವರು ಕಾರ್ಕಳ ತಾಲ್ಲೂಕಿನ ಸೋಮೇಶ್ವರದ ನಾಡ್ಪಾಲು ಗ್ರಾಮದಲ್ಲಿ 1963ರ ಆಗಸ್ಟ್‌15ರಂದು ಜನಿಸಿದವರು. ತಂದೆ ನಾರಾಯಣ ಶೆಟ್ಟಿ. ಅಲ್ಲಿಯೇ ಕೃಷಿ ಜೀವನ ಮಾಡಿಕೊಂಡಿದ್ದರು. ತಾಯಿ ರತ್ನ ಎಂ.ಶೆಟ್ಟಿ ಪತಿಯಂತೆಯೇ ಸಜ್ಜನಿಕೆಯನ್ನು ಮೆರೆದವರು. ಈ ಕೃಷಿಕ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಶೆಟ್ಟಿ ಅವರು ತಮ್ಮ ೧ರಿಂದ ೫ನೇ ತರಗತಿಯ ಪ್ರಾಥಮಿಕ ಶಿಕ್ಷಣವನ್ನು ಸೋಮೇಶ್ವರದಲ್ಲೂ, ೬ ಮತ್ತು ೭ನೇ ತರಗತಿಯನ್ನು ನಾಡ್ಪಾಲುವಿನಲ್ಲೂ ಪೂರೈಸಿ ತಮ್ಮ ಪ್ರೌಢಶಾಲಾ ಶಿಕ್ಷಣಕ್ಕೆ ಹೆಬ್ರಿ ಎಂಬ ಸ್ಥಳಕ್ಕೆ ಹೋಗಿ ಅಲ್ಲಿ ಪೂರೈಸಿದರು.

ಕಾಲಾನಂತರದಲ್ಲಿ ೧೯೮೪ರಲ್ಲಿ ಶಿವಮೊಗ್ಗದಲ್ಲಿ ಬಿ.ಕಾಂ ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಪದವಿಯನ್ನು ಪಡೆದರು. ಆನಂತರದಲ್ಲಿ ೧೯೯೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎಂ.ಕಾಂ ಪದವಿಯನ್ನೂ, ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ೨೦೦೦ನೇ ಇಸವಿಯಲ್ಲಿ ಕನ್ನಡ ಎಂ.ಎ ಪದವಿಯನ್ನೂ ಗಳಿಸಿದರು. ಆ ವೇಳೆಗಾಗಲೇ ತಮಲ್ಲಿ ಮನೆ ಮಾಡಿಕೊಂಡಿದ್ದ ಸಾಹಿತ್ಯಸಕ್ತಿಯನ್ನು ಉತ್ಕರ್ಷಿಸುವ ಸಲುವಾಗಿ ಡಾ.ಡಿ.ವಿ.ಗುಂಡಪ್ಪನವರ" ಮಂಕುತಿಮ್ಮನ ಕಗ್ಗ ಮತ್ತು ಕೆಲವು ಇತರ ಸಾಂದರ್ಭಿಕ ಮಾದರಿಗಳು" ಎಂಬ ವಿಷಯವಾಗಿ ಮಹಾಪ್ರಬಂಧ ರಚಿಸಿ ಅದನ್ನು ಡಾಕ್ಟರೇಟ್‌ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಈ ಮಹಾ ಪ್ರಬಂಧಕ್ಕಾಗಿ ಶ್ರೀನಿವಾಸ ಶೆಟ್ಟಿ ಅವರಿಗೆ ೨೦೧೫ರಲ್ಲಿ ಡಾಕ್ಟರೇಟ್‌ ಪದವಿ ಲಭಿಸಿತು. ಶ್ರೀನಿವಾಸ ಶೆಟ್ಟಿ ಅವರು ರಚಿಸಿದ " ಮಂಕುತಿಮ್ಮನ ಕಗ್ಗ - ಜೀವನ ದೀವಿಗೆ " ಎಂಬ ಎರಡು ಸಂಪುಟಗಳು ಜನಮನ್ನಣೆ ಗಳಿಸಿವೆ.

ಜೀವನ ನಿರ್ವಹಣೆಗಾಗಿ ೧೯೮೯ರಲ್ಲಿ ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆಗೆ ಸೇರಿ ಜನರ ಸಂಕಷ್ಟಗಳಿಗೆ ಪರಿಹಾರೋಪಾಯಗಳನ್ನು ಸೂಚಿಸುತ್ತಿದ್ದರು. ಕಳೆದ ೩೦ ವರ್ಷಗಳಿಂದ ಭಾರತೀಯ ವಿಮವಿಮಾ ನಿಗಮದಲ್ಲಿ ಸೇವೆಸಲ್ಲಿಸುತ್ತ ಜನಪರ ಕಾರ್ಯಗಳಿಗೆ ತಮ್ಮ ಸಾಧ್ಯ ಸಹಾಯ ಸಹಕಾರಗಳನ್ನು ಒದಗಿಸುತ್ತ ಜನಮನ್ನಣೆ ಗಳಿಸಿದ್ದಾರೆ.

ಡಾ.ಶ್ರೀನಿವಾಸ ಶೆಟ್ಟಿ ಅವರ ಸಾಹಿತ್ಯಾಸಕ್ತಿ ಅವರಿಂದ ಹಲವು ಮೌಲಿಕ ಕೃತಿಗಳ ರಚನೆಗೆ ಅವಕಾಶ ಮಾಡಿಕೊಟ್ಟಿದೆ. ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮಹೀಪತಿರಾಯರು, ಶ್ರೀನಿವಾಸನ ಕಗ್ಗ ಎಂಬ ಹೆಸರಿನಲ್ಲಿ ಚೌಪದಿರೂಪದ ಮುಕ್ತಕಕೃತಿ, ಅವರ ಅವರ ಡಾಕ್ಟರೇಟ್‌ ಪ್ರಬಂಧ ಪುಸ್ತಕರೂಪದಲ್ಲಿ ಹೊರತಂದಿರುವುದು, ವ್ಯಕ್ತಿತ್ವ ವಿಕಸನ ಮುಂತಾದವು ಜನರ ಗಮನ ಸೆಳೆದಿದೆ. ವ್ಯಕ್ತಿತ್ವ ವಿಕಸನದ ಬಗೆಗೆ ಡಾ. ಶ್ರೀನಿವಾಸ ಶೆಟ್ಟಿಯವರು 1000 ಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಯುವ ಪೀಳಿಗೆಯ ಮಂದಿಗೆ ದಾರಿದೀಪಕರಾಗಿದ್ದಾರೆ. ಬೆಂಗಳೂರಿನ ಗೋಖಲೆ ಇನ್ಸಿಟ್ಯೂಟ್‌ನಲ್ಲಿ ಉಪನ್ಯಾಸ, ಡಿವಿಜಿಯವರ ಕಗ್ಗಗಳ ಕುರಿತು ಕುಮಟ, ಶಿವಮೊಗ್ಗದಲ್ಲಿ ಉಪನ್ಯಾಸ ನೀಡಿದ್ದಾರೆ. ಕಾವ್ಯವಾಚನ ಕಲೆಯನ್ನೂ ರೂಡಿಸಿಕೊಂಡಿರುವ ಶ್ರೀನಿವಾಸ ಶೆಟ್ಟಿ ಅವರು ಪುತಿನ ಅವರ ಶ್ರೀಹರಿ ಚರಿತೆ ಕಾವ್ಯದ ವಾಚನವನ್ನು ನಡೆಸಿಕೊಟ್ಟಿದ್ದಾರೆ. ಕಾವ್ಯಗಳ ವಾಖ್ಯಾನಕ್ಕೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಷ್ಟಾವಧಾನ ಕಾರ್ಯಕ್ರಮಗಳಲ್ಲಿ ಪ್ರಚ್ಛಕರಾಗಿ ಭಾಗವಹಿಸಿದ್ದಾರೆ.

ಡಾ. ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಅವರ ವೃತ್ತಿಸೇವಾ ಕೌಶಲವನ್ನು ಮತ್ತು ಸಾಹಿತ್ಯ ಸೇವೆಯನ್ನು ಹಲವು ಸಂಘಸಂಸ್ಥೆಗಳು ಗುರುತಿಸಿ ಪ್ರಶಸ್ತಿ ಪ್ರದಾನಿಸಿ ಪುರಸ್ಕೃರಿಸಿವೆ. ಮಂಡ್ಯದ ಗುರುದೇವ ಲಲಿತಾಕಲಾ ಅಕಾಡೆಮಿ, ಮೈಸೂರಿನ ಕನ್ನಡ ಸಂಘ, ಮಂಡ್ಯದ ರಾಗ ರಂಜಿನಿ ಕಲಾ ವೇದಿಕೆ, ಮಂಡ್ಯದ ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ, ಮೈಸೂರು ರೋಟರಿ ಉತ್ತರ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿಗಳು ಸಂಯುಕ್ತವಾಗಿ ನೀಡಿದ " ರೋಟರಿ - ಮುಕ್ತಕ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಶ್ರೀನಿವಾಸ ಶೆಟ್ಟಿಯವರ ಹೆಗಲೇರಿದೆ. ಶ್ರೀನಿವಾಸ ಶೆಟ್ಟಿ ಅವರ ಅಚ್ಚುಮೆಚ್ಚಿನ ಮುಕ್ತಕ ಕೃತಿಗಳು ಎಂದರೆ " ಡಿವಿಜಿ ಅವರ ಮಂಕುತಿಮ್ಮನ ಕಗ್ಗ " ಮತ್ತು ಮರುಳಮುನಿಯನ ಕಗ್ಗ. ಡಾ.ಪ್ರದೀಪ ಕುಮಾರ ಹೆಬ್ರಿ ಅವರ "ಯುಗಾವತಾರಿ" ಮಹಾಕಾವ್ಯದ ಗಮಕವಾಚನಕ್ಕೆ ರಾಜ್ಯದ ಹಲವೆಡೆ ವ್ಯಾಖ್ಯಾನ ನೀಡಿದ್ದಾರೆ. ಸಜ್ಜನಿಕೆಯ ಲಕ್ಷಣಗಳನ್ನು ಆತುಕೊಂಡು ತಮ್ಮ ವೃತ್ತಿಸೇವೆ ಮತ್ತು ಸಾಹಿತ್ಯ ಸೇವೆ ಎರಡರಲ್ಲೂ ಸಮಾನ ನಿಷ್ಠೆ, ಬದ್ಧತೆಗಳನ್ನು ಇಟ್ಟುಕೊಂಡಿರುವ ಡಾ.ಎಸ್.ಶ್ರೀನಿವಾಸ ಶೆಟ್ಟಿ ಅವರು ತಮ್ಮ ಪತ್ನಿ ಉದ್ಯಮಿಯಾಗಿರುವ ಅನಿತಾ ಎಸ್‌ ಶೆಟ್ಟಿ, ಒಬ್ಬ ಮಗ ವೈದ್ಯರಾದ ಡಾ.ಸಮಂತ್‌ ಎಸ್‌ ಶೆಟ್ಟಿ ಮತ್ತು ಎಂಜಿನಿಯರ್‌ ಆಗಿರುವ ಮಗಳು ನಮಿತ ಎಸ್‌ಶೆಟ್ಟಿ ಅವರೊಂದಿಗೆ ಮಂಡ್ಯದಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News