ಕಾಶಿ ವಿಶ್ವನಾಥ ದೇವಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ಲಕ್ನೋ ವಿವಿಯ ದಲಿತ ಪ್ರೊಫೆಸರ್ ವಿರುದ್ಧ ಎಫ್‍ಐಆರ್

Update: 2022-05-11 08:57 GMT
Photo: Twitter/NaveenKumar

ಲಕ್ನೋ: ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ದಲಿತ ಪ್ರೊಫೆಸರ್ ಒಬ್ಬರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂದು scroll.in ವರದಿ ಮಾಡಿದೆ.

ಸಂಸ್ಥೆಯ ವಿದ್ಯಾರ್ಥಿ ಅಮನ್ ದುಬೆ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಹಿಂದಿ ವಿಭಾಗದ ಸಹಾಯಕ ಪ್ರೊಫೆಸರ್ ರವಿ ಕಾಂತ್ ವಿರುದ್ಧ ಹಸನ್‍ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ವೆಬ್‍ಸೈಟ್ ಒಂದು ಆಯೋಜಿಸಿದ್ದ ಆನ್‍ಲೈನ್ ಚರ್ಚೆ ವೇಳೆ ರವಿ ಕಾಂತ್ ಅವರು ನೀಡಿದ ಹೇಳಿಕೆಯು ಕ್ಯಾಂಪಸ್‍ನ ಹಿಂದು ವಿದ್ಯಾರ್ಥಿಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಆದರೆ ತಾವೇನೂ ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿಲ್ಲ ಬದಲು ಬಿ ಪಟ್ಟಾಭಿ ಸೀತಾರಾಮಯ್ಯ ಅವರ ಫೆದರ್ಸ್ ಎಂಡ್ ಸ್ಟೋನ್ಸ್ ಕೃತಿಯ ಭಾಗವನ್ನು ಉಲ್ಲೇಖಿಸಿದ್ದಾಗಿ ಪ್ರೊಫೆಸರ್ ಹೇಳಿದ್ದಾರೆ.

ಐಟಿ ಕಾಯಿದೆಯ ಸೆಕ್ಷನ್ 66 ಅನ್ವಯ ಹಾಗೂ ಐಪಿಸಿ ಸೆಕ್ಷನ್ 153ಎ, 504, 505(2) ಅನ್ವಯ ಪ್ರಕರಣ ದಾಖಲಾಗಿದೆ.

ಮಂಗಳವಾರ ಲಕ್ನೋ ವಿವಿ ಕ್ಯಾಂಪಸ್‍ನಲ್ಲಿ ರವಿಕಾಂತ್ ವಿರುದ್ಧ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪ್ರೊಫೆಸರ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದು ಅವರು ತಮ್ಮ ಚೇಂಬರ್ ನಿಂದ ಹೊರಬಂದ ಕ್ಷಮೆಯಾಚಿಸಿದ್ದಾರೆ ಎಂದು ಎಬಿವಿಪಿ ಕ್ಯಾಂಪಸ್ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಮೌರ್ಯ ಹೇಳಿದ್ದಾರೆ.

"ಆದರೆ ಇದಾದ ಕೆಲವೇ ಕ್ಷಣಗಳ ನಂತರ ಕಾಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಬಿವಿಪಿ ತನ್ನನ್ನು ಥಳಿಸಲು ಉದ್ದೇಶಿಸಿದೆ ಎಂದು ಆರೋಪಿಸಿದ್ದರು. ಇದನ್ನು ವಿರೋಧಿಸಿ ಅವರು ಕ್ಯಾಂಪಸ್‍ನಲ್ಲಿ ದ್ವೇಷದ ಭಾವನೆ ಹರಡುತ್ತಿರುವ ಆರೋಪದ ಮೇಲೆ ಅವರನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹಿಸಲಾಗಿದೆ,'' ಎಂದು ಮೌರ್ಯ ಹೇಳಿದ್ದಾರೆ.

ಆದರೆ ಚರ್ಚೆಯ ತಿರುಚಲಾದ ವೀಡಿಯೋವನ್ನು ಹರಿಯಬಿಡಲಾಗಿದೆ ಎಂದು ಪ್ರೊಫೆಸರ್ ಹೇಳಿದ್ದಾರೆ ಹಾಗೂ ತಾವು ದಲಿತರೆಂಬ ಕಾರಣಕ್ಕೆ ತಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಡೀ ವೀಡಿಯೋ ನೋಡಿದರೆ ಗೊಂದಲ ಪರಿಹಾರವಾಗುವುದು, ಯಾರ ಭಾವನೆಗಾದರೂ ಘಾಸಿಯಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾಗಿಯೂ ಅವರು ಹೇಳಿದ್ದಾರೆ.

ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಒಂದು ಗುಂಪು "ದೇಶ್ ಕೆ ಗದ್ದಾರೋಂ ಕೊ ಗೋಲಿ ಮಾರೋ'' ಘೋಷಣೆ ಕೂಗುತ್ತಿರುವುದು ಕೇಳಿಸುತ್ತದೆ. ತಾವು ಹಲವು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿರುವುದಾಗಿ ಪ್ರೊಫೆಸರ್ ರವಿಕಾಂತ್ ಹೇಳಿದ್ದಾರೆ.

ತಮ್ಮ ಹೇಳಿಕೆ ಕುರಿತು ಮೂರು ದಿನಗಳೊಳಗೆ ವಿವರಣೆ ನೀಡುವಂತೆ ರವಿಕಾಂತ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಲಕ್ನೋ ವಿವಿ ವಕ್ತಾರ ದುರ್ಗೇಶ್ ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News