ವೈವಾಹಿಕ ಅತ್ಯಾಚಾರ ಅಪರಾಧೀಕರಣ ವಿಚಾರ: ವಿಭಿನ್ನ ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್, ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ

Update: 2022-05-11 10:18 GMT

ಹೊಸದಿಲ್ಲಿ: ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಬೇಕೇ ಅಥವಾ ಬೇಡವೇ ಎಂಬ ಬಹು-ಚರ್ಚಿತ ವಿಚಾರದ ಕುತಂತೆ ದಿಲ್ಲಿ ಹೈಕೋರ್ಟ್ ಇಂದು ವಿಭಜಿತ ತೀರ್ಪನ್ನು ನೀಡಿದೆ. ಈ ಪ್ರಕರಣ ಇನ್ನು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ. ಈ ಪ್ರಕರಣ ಕುರಿತು ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೆರ್ ಮತ್ತು ಹರಿ ಶಂಕರ್ ಸಹಮತ ಹೊಂದಿಲ್ಲ.

ವೈವಾಹಿಕ ಅತ್ಯಾಚಾರ ಸಂಬಂಧಿ ಕಾನೂನಿನಲ್ಲಿ ಒಂದು ಹೊರತುಪಡಿಸುವಿಕೆ ಸಂವಿಧಾನದ ಉಲ್ಲಂಘನೆಯಾಗದು ಎಂದು ತಾವು ನಂಬಿರುವುದಾಗಿ ಜಸ್ಟಿಸ್ ಶಂಕರ್ ಹೇಳಿದ್ದಾರೆ.

ಇಬ್ಬರು ನ್ಯಾಯಮೂರ್ತಿಗಳೂ ತಮ್ಮ ತೀರ್ಪನ್ನು ಫೆಬ್ರವರಿ 21ರಂದು ಕಾದಿರಿಸಿದ್ದರು. ಅತ್ಯಾಚಾರ ಕಾನೂನಿನಡಿ ಗಂಡಂದಿರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ದೀರ್ಘಕಾಲದ ವಿಚಾರಣೆಯ ನಂತರವೂ ನ್ಯಾಯಮೂರ್ತಿಗಳಿಗೆ ಸಹಮತಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.

ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸುವ ಕುರಿತಂತೆ ತನ್ನ ನಿಲುವು ಸ್ಪಷ್ಟಪಡಿಸಲು ಫೆಬ್ರವರಿ 7ರಂದು ದಿಲ್ಲಿ ಹೈಕೋರ್ಟ್ ಕೇಂದ್ರಕ್ಕೆ ಎರಡು ವಾರ ಕಾಲಾವಕಾಶ ನೀಡಿತ್ತು.

ಆದರೆ ಕೇಂದ್ರ ಮಾತ್ರ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿತ್ತು. ಇದನ್ನು ನ್ಯಾಯಮುರ್ತಿಗಳು ತಿರಸ್ಕರಿಸಿದ್ದರಲ್ಲದೆ ಪ್ರಕರಣದ ತೀರ್ಪು ನೀಡುವಿಕೆಯನ್ನು ಮುಂದೂಡುತ್ತಾ ಹೋಗಲು ಸಾಧ್ಯವಿಲ್ಲ ಎಂದಿದ್ದರು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯವನ್ನೂ ಕೇಳಿದ್ದಾಗಿ ಕೇಂದ್ರ ಹೇಳಿತ್ತಲ್ಲದೆ ಈ ಪ್ರಕರಣವು ಕುಟುಂಬ ಜೀವನದ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುವುದರಿಂದ ಸಲಹಾ ಪ್ರಕ್ರಿಯೆ ಅಗತ್ಯವೆಂದೂ ಹೇಳಿತ್ತು.

ಕಾನೂನಿನಡಿ ಇರುವ ವಿನಾಯಿತಿ ಪ್ರಕಾರ ಮಹಿಳೆ ಅಪ್ರಾಪ್ತೆಯಲ್ಲದೇ ಇದ್ದರೆ ಆಕೆಯೊಂದಿಗೆ ಪತಿಯೊಬ್ಬ ಬಲವಂತದಿಂದ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಪರಿಗಣಿತವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News