ಅಂತಾರಾಷ್ಟ್ರೀಯ ಹರ್ಡಲ್ಸ್‌ನಲ್ಲಿ 20 ವರ್ಷಗಳ ಹಳೆಯ ದಾಖಲೆ ಮುರಿದು ಚಿನ್ನ ಗೆದ್ದ ಜ್ಯೋತಿ ಯರಾಜಿ

Update: 2022-05-11 11:38 GMT
Photo: twitter.com/sports_odisha

ಲಿಮಾಸೋಲ್, ಮೇ 11: ಸೈಪ್ರಸ್‌ನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ ಭಾರತದ ಜ್ಯೋತಿ ಯರಾಜಿ 100 ಮೀಟರ್ ಹರ್ಡಲ್ಸ್‌ನ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದಿದ್ದಾರೆ.

22ರ ಹರೆಯದ ಜ್ಯೋತಿ ಮಂಗಳವಾರ 100 ಮೀಟರ್ ಹರ್ಡಲ್ಸ್ ಅನ್ನು 13.23 ಸೆಕೆಂಡುಗಳಲ್ಲಿ ಪೂರ್ಣಗೊಳಿಸುವ ಮೂಲಕ ಅನುರಾಧ ಬಿಸ್ವಾಲ್ ಅವರ 2002 ರ ದಾಖಲೆಯನ್ನು 0.15 ಸೆಕೆಂಡುಗಳ ಅಂತರದಿಂದ ಮುರಿದರು. ಬಿಸ್ವಾಲ್ 2002ರಲ್ಲಿ ʼಡಿಡಿಎ-ರಾಜಾ ಭಲೇಂದ್ರ ಸಿಂಗ್ ರಾಷ್ಟ್ರೀಯ ಸರ್ಕ್ಯೂಟ್ ಮೀಟ್‌ʼನಲ್ಲಿ 13.38 ಸೆಕೆಂಡುಗಳಲ್ಲಿ ಈ ದಾಖಲೆ ಮಾಡಿದ್ದರು.

ಸೈಪ್ರಸ್ ಇಂಟರ್‌ನ್ಯಾಶನಲ್ ಮೀಟ್ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಚಾಲೆಂಜರ್ ಕ್ಯಾಟಗರಿ-ಡಿ ಸ್ಪರ್ಧೆಯಾಗಿದೆ.

ಕಳೆದ ತಿಂಗಳು ನಡೆದ ಫೆಡರೇಶನ್ ಕಪ್‌ನಲ್ಲಿ, ಜ್ಯೋತಿ 100 ಮೀ ಹರ್ಡಲ್ಸ್ ಅನ್ನು 13.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದರು, ಆದರೆ ತಾಂತ್ರಿಕ ಕಾರಣಗಳಿಂದ ಅವರ ಆ ಪ್ರಯತ್ನವನ್ನು ಪರಿಗಣಿಸಲಾಗಿಲ್ಲ.

ಇನ್ನು, ಭಾರತದ ಮತ್ತೋರ್ವ ಆಟಗಾರ್ತಿ ಲಿಲಿ ದಾಸ್ ಮಹಿಳೆಯರ 800 ಮೀಟರ್ ಓಟದಲ್ಲಿ 4.17.79 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು.

ರಾಷ್ಟ್ರೀಯ ದಾಖಲೆ ಹೊಂದಿರುವ ಅಮ್ಲನ್ ಬೊರ್ಗೊಹೈನ್, ಪುರುಷರ 200 ಮೀ ಓಟದಲ್ಲಿ 21.32 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News