ವಾರದಲ್ಲಿ ಎರಡನೇ ಸಲ ಸಾರ್ವಕಾಲಿಕ ಕುಸಿತ ದಾಖಲಿಸಿದ ರೂಪಾಯಿ

Update: 2022-05-12 16:37 GMT

ಹೊಸದಿಲ್ಲಿ,ಮೇ 12: ಏಷ್ಯನ್ ಕರೆನ್ಸಿಗಳ ಕುಸಿತ ಮತ್ತು ದೇಶಿಯ ಶೇರು ಮಾರುಕಟ್ಟೆಗಳಲ್ಲಿ ಪತನದ ನಡುವೆಯೇ ಭಾರತೀಯ ರೂಪಾಯಿಯ ವೌಲ್ಯವು ಗುರುವಾರ ಅಮೆರಿಕದ ಡಾಲರ್ನೆದುರು 77.63ಕ್ಕೆ ಇಳಿದು ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಡಾಲರ್‌ನೆದುರು 77.52ರಲ್ಲಿ ಆರಂಭಗೊಂಡಿದ್ದ ರೂಪಾಯಿ ಮೌಲ್ಯ ಆರಂಭಿಕ ವಹಿವಾಟುಗಳಲ್ಲಿ 77.50 ಮತ್ತು 77.57ರ ನಡುವೆ ಓಲಾಡುತ್ತಿತ್ತು.

ಬುಧವಾರ ರೂಪಾಯಿ ಮೌಲ್ಯ 77.24ರಲ್ಲಿ ಸ್ಥಿತಗೊಂಡಿತ್ತು. ಗುರುವಾರದ ಬೆಳವಣಿಗೆಯ ಬಳಿಕ 77.63ರ ಸಾರ್ವಕಾಲಿಕ ಕುಸಿತವನ್ನು ಕಂಡಿತು. ಇದು ಈ ವಾರದಲ್ಲಿ ಡಾಲರ್‌ನೆದುರು ರೂಪಾಯಿಯ ಎರಡನೇ ಸಾರ್ವಕಾಲಿಕ ಕುಸಿತವಾಗಿದೆ.

ಸೋಮವಾರ ರೂಪಾಯಿ ಡಾಲರ್‌ನೆದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದ್ದ 77.50ರಲ್ಲಿ ಮುಕ್ತಾಯಗೊಂಡಿತ್ತು. ವಿದೇಶಿ ಮಾರುಕಟ್ಟೆಗಳಲ್ಲಿಯ ಕುಸಿತ ರೂಪಾಯಿ ವೌಲ್ಯ ಪತನಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.

ಗುರುವಾರ ಭಾರತೀಯ ಶೇರು ಮಾರುಕಟ್ಟೆಗಳು ತಲ್ಲಣಿಸಿದ್ದು,ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 1158.08 ಅಂಶಗಳ ನಷ್ಟದೊಂದಿಗೆ 52930.31ರಲ್ಲಿ ಮುಕ್ತಾಯಗೊಂಡಿದ್ದರೆ ಎನ್ಎಸ್ಇ ಸೂಚ್ಯಂಕ ನಿಫ್ಟಿ 359.10 ಅಂಶಗಳ ನಷ್ಟದೊಂದಿಗೆ 15808ಕ್ಕೆ ದಿನದಾಟವನ್ನು ಮುಗಿಸಿದೆ.

ಹಣದುಬ್ಬರ ಮತ್ತು ಆರ್‌ಬಿಐನಿಂದ ಅನಿರೀಕ್ಷಿತ ಬಡ್ಡಿದರ ಏರಿಕೆ ಭಾರತೀಯ ಮಾರುಕಟ್ಟೆಗಳಲ್ಲಿ ಒಂದು ರೀತಿಯ ಅಳುಕನ್ನು ಸೃಷ್ಟಿಸಿವೆ ಎಂದು ವೆಲ್ತ್‌ಮಿಲ್ಸ್ ಸೆಕ್ಯೂರಿಟಿಸ್‌ನ ನಿರ್ದೇಶಕ ಕ್ರಾಂತಿ ಬಥಿನಿ ಹೇಳಿದರು. ಈ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.1.19ರಷ್ಟು ಕುಸಿದಿದ್ದು,ಪ್ರತಿ ಬ್ಯಾರೆಲ್‌ಗೆ 106.22 ಡಾ.ಗಿಳಿದಿತ್ತು.

ಅಮೆರಿಕದಲ್ಲಿ ಹಣದುಬ್ಬರ ಏರಿಕೆಯು ಬಿಗಿಯಾದ ಹಣಕಾಸು ಕ್ರಮಗಳನ್ನು ಉತ್ತೇಜಿಸಿದ್ದು,ವಾಲ್‌ ಸ್ಟ್ರೀಟ್ ಕುಸಿತವು ಏಷ್ಯದ ಶೇರು ಮಾರುಕಟ್ಟೆಗಳು ಗುರುವಾರ ಪತನಗೊಳ್ಳಲು ಕಾರಣವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟಿಸ್‌ನ ದೀಪಕ ಜಸಾನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News