ಉಕ್ರೇನ್ ಸಂಘರ್ಷ; ಯುಎನ್‍ಎಚ್‍ಆರ್‌ಸಿ ನಿರ್ಣಯ ಮೇಲಿನ ಮತದಾನದಿಂದ ಹೊರಗುಳಿದ ಭಾರತ

Update: 2022-05-13 02:16 GMT

ಹೊಸದಿಲ್ಲಿ: ರಷ್ಯಾದ ಅತಿಕ್ರಮಣವನ್ನು ತಡೆಯುವ ಮೂಲಕ ಉಕ್ರೇನ್‍ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನಿರ್ಣಯ ಮೇಲಿನ ಮತದಾನದಿಂದ ಭಾರತ, ಪಾಕಿಸ್ತಾನ ಸೇರಿದಂತೆ 12 ದೇಶಗಳು ಹೊರಗುಳಿದಿವೆ.

47 ಸದಸ್ಯ ದೇಶಗಳ ಮಂಡಳಿಯಲ್ಲಿ ಚೀನಾ ಹಾಗೂ ಎರಿಟ್ರಿಯಾ ಮಾತ್ರ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು.

ತನ್ನ ಸಮತೋಲಿನ ನಿರ್ಧಾರವನ್ನು ಕಾಪಾಡಿಕೊಳ್ಳುವ ಕ್ರಮವಾಗಿ, ನಿರ್ಣಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಭಾರತದ ಪ್ರತಿನಿಧಿ, ಉಕ್ರೇನ್ ಜನತೆಯ ಮಾನವಹಕ್ಕುಗಳನ್ನು ಗೌರವಿಸಬೇಕು ಮತ್ತು ಸಂರಕ್ಷಿಸಬೇಕು ಎಂದು ಕರೆ ನೀಡಿದರು. ಜತೆಗೆ ಜಾಗತಿಕವಾಗಿ ಮಾನವಹಕ್ಕುಗಳ ಸಂರಕ್ಷಣೆಗೆ ಒತ್ತು ನೀಡಲು ತಾನು ಬದ್ಧ ಎಂದು ಸ್ಪಷ್ಟಪಡಿಸಿದರು.

ಉಕ್ರೇನ್‍ನ ಕೀವ್, ಖಕೀರ್ವ್, ಚೆರ್ನೀವ್ ಮತ್ತು ಸುಮಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ತನಿಖೆ ನಡೆಸಲು ನೇಮಕ ಮಾಡಿದ ಆಯೋಗದ ನಿರ್ದಿಷ್ಟ ತನಿಖೆಗೆ ಇದು ಹೆಚ್ಚುವರಿ ಅಭಿಪ್ರಾಯ ಸಂಗ್ರಹದ ಕ್ರಮವಾಗಿತ್ತು. ನಿರ್ಣಯದ ಪರವಾಗಿ 33 ಮತಗಳು ಚಲಾವಣೆಯಾದವು. ಉಕ್ರೇನ್‍ನ ಸಂಘರ್ಷಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲ್ಪಟ್ಟು, ರಷ್ಯಾದ ಭೂಪ್ರದೇಶದಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾದ ಉಕ್ರೇನ್ ಜನರನ್ನು ಅಂತರರಾಷ್ಟ್ರೀಯ ಏಜೆನ್ಸಿಗಳು ಯಾವುದೇ ಅಡೆತಡೆ ಇಲ್ಲದೇ ಸಂಪರ್ಕಿಸಲು ಅಗತ್ಯ ವಾತಾವರಣ ಕಲ್ಪಿಸುವಂತೆ ರಷ್ಯಾವನ್ನು ಒತ್ತಾಯಿಸಲಾಗಿದೆ. ಆದರೆ ಈ ಜನ ತಮ್ಮ ಸ್ವ- ಇಚ್ಛೆಯಿಂದ ರಷ್ಯಾಗೆ ಆಗಮಿಸಿದ್ದಾರೆ ಎನ್ನುವುದು ರಷ್ಯಾದ ಹೇಳಿಕೆ.

ತನಿಖಾ ಆಯೋಗವನ್ನು ನೇಮಕ ಮಾಡುವ ಸಂಬಂಧ ಕಳೆದ ಮಾರ್ಚ್‍ನಲ್ಲಿ ನಡೆದ ಮಂಡಳಿಯ ಮತದಾನದಿಂದ ಕೂಡಾ ಭಾರತ ಹೊರಗುಳಿದಿತ್ತು. ಆದಾಗ್ಯೂ ಬುಚಾದಲ್ಲಿ ನಡೆದ ನಾಗರಿಕರ ಹತ್ಯೆ ಘಟನೆಯನ್ನು ಭಾರತ ಖಂಡಿಸಿತ್ತು ಹಾಗೂ ಈ ಬಗ್ಗೆ ಸ್ವತಂತ್ರ್ಯ ತನಿಖೆ ನಡೆಸುವಂತೆ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News