ಪೌರತ್ವ ಸಾಬೀತುಪಡಿಸಲು ನೋಟಿಸ್: ಪುತ್ರ ಆತ್ಮಹತ್ಯೆಗೈದ 10 ವರ್ಷಗಳ ನಂತರ ವೃದ್ಧೆಯ ಭಾರತೀಯ ಪೌರತ್ವ ಸಾಬೀತು
ಗುವಾಹಟಿ: ಅಸ್ಸಾಂನ 82 ವರ್ಷದ ಅಕೋಲ್ ರಾಣಿ ನಾಮಸುದ್ರ ಅವರನ್ನು ಕೊನೆಗೂ 'ಭಾರತೀಯ' ಪೌರತ್ವ ಹೊಂದಿದವರೆಂದು ಬುಧವಾರ ಘೋಷಿಸಲಾಯಿತು. ತಮ್ಮ ಪೌರತ್ವ ಸಾಬೀತುಪಡಿಸುವಂತೆ ಮೂರು ತಿಂಗಳ ಹಿಂದೆ ಅವರಿಗೆ ನೋಟಿಸ್ ಜಾರಿಯಾಗಿತ್ತು.
ಆದರೆ ಅಕೋಲ್ ರಾಣಿ ಅವರಿಗೆ ಪೌರತ್ವ ದೊರೆತ ಖುಷಿಯಿದೆಯಾದರೂ 10 ವರ್ಷಗಳ ಹಿಂದೆ ತಮಗೆ ದೊರೆತಂತುಹುದೇ ನೋಟಿಸ್ ಪಡೆದ ನಂತರ ತನ್ನ 40 ವರ್ಷ ಪ್ರಾಯದ ಪುತ್ರ ಆತ್ಮಹತ್ಯೆಗೈದ ದುಃಖ ಅವರಲ್ಲಿ ಇನ್ನೂ ಮಡುಗಟ್ಟಿದೆ ಎಂದು thequint.com ವರದಿ ಮಾಡಿದೆ.
ತಮ್ಮ 2014 ಲೋಕಸಭಾ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಆಗ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಕೂಡ ಅಕೋಲ್ ರಾಣಿ ಅವರ ಪುತ್ರ ಅರ್ಜುನ್ ಸಾವಿನ ಕುರಿತು ಉಲ್ಲೇಖಿಸಿದ್ದರು. "ಅರ್ಜುನ್ ತನಗಾಗಿ ಸತ್ತಿಲ್ಲ, ಬದಲು ದಿಗ್ಬಂಧನ ಕೇಂದ್ರದಲ್ಲಿರುವ ಲಕ್ಷಾಂತರ ಜನರ ಹಕ್ಕುಗಳಿಗಾಗಿ ಬಲಿದಾನಗೈದಿದ್ದಾರೆ. ಅವರಿಗಾಗಿ ಅರ್ಜುನ್ ನಾಮಸಮುದ್ರ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ,'' ಎಂದು ಮೋದಿ ಹೇಳಿದ್ದರು.
ಹರಿತಿಕರ್ ಗ್ರಾಮದ ನಿವಾಸಿಯಾಗಿರುವ ಅಕೋಲ್ ರಾಣಿ ಅವರಿಗೆ ಫೆಬ್ರವರಿಯಲ್ಲಿ ಫಾರಿನರ್ಸ್ ಟ್ರಿಬ್ಯುನಲ್ ನೋಟಿಸ್ ಜಾರಿಯಾಗಿತ್ತು. ಅವರು ಮಾರ್ಚ್ 25, 1971ರ ನಂತರ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರೆಂದು ಆರೋಪಿಸಿ 2000ರಲ್ಲಿ ದಾಖಲಿಸಲಾಗಿದ್ದ ಕೇಸ್ ಸಂಬಂಧ ಈ ನೋಟಿಸ್ ಜಾರಿಯಾಗಿತ್ತು.
ಅವರ ಪುತ್ರ ಅರ್ಜುನ್ ಹಾಗೂ ಪುತ್ರಿ ಅಂಜಲಿಗೂ 2012ರಲ್ಲಿ ನೋಟಿಸ್ ಜಾರಿಯಾಗಿತ್ತು. ಆದರೆ ತನ್ನನ್ನು ಬಂಧಿಸಿ ನಂತರ ಬಾಂಗ್ಲಾದೇಶಕ್ಕೆ ಕಳುಹಿಸಬಹುದೆಂಬ ಭೀತಿಯಿಂದ ಅರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಕುಟುಂಬ ಹೇಳಿದೆ. ಆದರೆ ಒಂದು ವರ್ಷದ ನಂತರ ನ್ಯಾಯಾಲಯ ಆತನನ್ನು "ಭಾರತೀಯ'' ಎಂದು ಘೋಷಿಸಿದ್ದರೆ ನಂತರ ಅಂಜಲಿಯನ್ನೂ ಭಾರತೀಯ ಪೌರತ್ವ ಹೊಂದಿದವರೆಂದು ಘೋಷಿಸಲಾಗಿತ್ತು.