ಸಂತೂರ್ ಮಾಂತ್ರಿಕ ಶರ್ಮ ಅಂತಿಮಯಾತ್ರೆಗೆ ಹೆಗಲುಕೊಟ್ಟ ತಬಲಾ ಮಾಂತ್ರಿಕ ಝಾಕಿರ್‌ ಹುಸೇನ್

Update: 2022-05-13 13:12 GMT
Photo: PTI

ಹೊಸದಿಲ್ಲಿ: ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾ ಅವರ ನಿಧನ ಸಂಗೀತ ಲೋಕದಲ್ಲಿ ದೊಡ್ಡ ಶೂನ್ಯವನ್ನುಂಟು ಮಾಡಿದೆ. 84 ವರ್ಷದ ಅವರು ಮೇ 10 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಮರುದಿನ ಅಂತ್ಯಕ್ರಿಯೆ ನಡೆಸಲಾಯಿತು.

ಶರ್ಮಾ ನಿಧನಕ್ಕೆ ಪ್ರಪಂಚದಾದ್ಯಂತ ಶ್ರದ್ಧಾಂಜಲಿಗಳು ಹರಿದುಬಂದಿದೆ. ಇದೀಗ, ಶರ್ಮಾ ಅವರ ಅಂತಿಮಯಾತ್ರೆಗೆ ಹೆಗಲುಕೊಟ್ಟ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಂಡಿತ್ ಶರ್ಮಾ ಅವರ ಅಂತ್ಯಕ್ರಿಯೆಯ ಚಿತಾಗಾರದ ಬಳಿ ಝಾಕಿರ್‌ ಹುಸೇನ್‌ ಏಕಾಂಗಿಯಾಗಿ ನಿಂತಿರುವ ಮತ್ತೊಂದು ಫೋಟೋ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಅವರ ಅಂತಿಮ ವಿದಾಯವನ್ನು ಟ್ವಿಟರ್‌ ಬಳಕೆದಾರರವರು "ಕಟುವಾದ" ಕ್ಷಣ ಎಂದು ಕರೆದಿದ್ದಾರೆ.

ಜಾಕಿರ್ ಹುಸೇನ್ ಮತ್ತು ಪಂಡಿತ್ ಶಿವಕುಮಾರ್ ಶರ್ಮಾ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಈ ಇಬ್ಬರ ಜೋಡಿಯು ಅನೇಕ ಸಂಗೀತ ಕಚೇರಿಗಳನ್ನು ನಡೆಸಿ ಅಸಂಖ್ಯಾತ ಸಂಗೀತ ಪ್ರೇಮಿಗಳನ್ನು ಮೋಡಿಗೊಳಪಡಿಸಿದೆ .

ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಬಾನಾ ಅಜ್ಮಿ, ಗೀತರಚನೆಕಾರ ಜಾವೇದ್ ಅಖ್ತರ್, ಸಂಗೀತ ಸಂಯೋಜಕ ಜೋಡಿ ಜತಿನ್-ಲಲಿತ್ ಮತ್ತು ಗಾಯಕಿ ಇಲಾ ಅರುಣ್ ಮೊದಲಾದ ಗಣ್ಯರು ಪಂಡಿತ್ ಶರ್ಮಾ ಅವರ ಅಂತ್ಯಕ್ರಿಯೆಯ ಮೊದಲು ಅಂತಿಮ ನಮನ ಸಲ್ಲಿಸಿದ್ದಾರೆ.
ಪಂಡಿತ್ ಶರ್ಮಾ ಅವರು 1986 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು, ನಂತರ 1991 ರಲ್ಲಿ ಪದ್ಮಶ್ರೀ ಮತ್ತು 2001 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News