'ಒಂದು ದೇಶ, ಒಂದು ಭಾಷೆ' ಪರ ಬ್ಯಾಟ್ ಬೀಸಿದ ಶಿವಸೇನೆ ನಾಯಕ ಸಂಜಯ್ ರಾವತ್

Update: 2022-05-14 08:01 GMT

ಮುಂಬೈ: ಭಾರತದಾದ್ಯಂತ ಹಿಂದಿ ಮಾತನಾಡುತ್ತಾರೆ ಹಾಗೂ ಅದು  ಸ್ವೀಕಾರಾರ್ಹತೆಯನ್ನು ಹೊಂದಿದೆ. ಎಲ್ಲಾರಾಜ್ಯಗಳಲ್ಲಿ ಒಂದೇ ಭಾಷೆ ಇರಬೇಕು ಎಂಬ ಸವಾಲನ್ನು ಕೇಂದ್ರ ಸಚಿವ ಅಮಿತ್ ಶಾ ಸ್ವೀಕರಿಸಬೇಕು ಎಂದು ಹೇಳಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು "ಒಂದು ದೇಶ, ಒಂದು ಭಾಷೆ" ಪರವಾಗಿ ಬ್ಯಾಟ್ ಬೀಸಿದರು.

ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕೇ ಹೊರತು ಸ್ಥಳೀಯ ಭಾಷೆಗಳಿಗೆ ಅಲ್ಲ  ಎಂದು ಶಾ ಹೇಳಿಕೆ ನೀಡಿದ  ಒಂದು ತಿಂಗಳ ನಂತರ ರಾವತ್  ಹೇಳಿಕೆ ನೀಡಿದ್ದಾರೆ.

ಶಾ ಅವರ  ಹೇಳಿಕೆಯನ್ನು ದಕ್ಷಿಣದ ರಾಜ್ಯಗಳ ಹಲವಾರು ಪ್ರಮುಖ ರಾಜಕೀಯ ನಾಯಕರು ತೀವ್ರವಾಗಿ ವಿರೋಧಿಸಿದ್ದರು. ಶಾ  ಅವರು ಹಿಂದಿಯನ್ನು ಜನರ ಮೇಲೆ ಹೇರುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.  ಇದು ಪ್ರಾದೇಶಿಕ ಭಾಷೆಯನ್ನು ದುರ್ಬಲಗೊಳಿಸುವ ಕಾರ್ಯಸೂಚಿಯ ಒಂದು ಭಾಗ ಎಂದೂ ಕರೆದಿದ್ದರು.

ತಮಿಳುನಾಡು ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರು ಹಿಂದಿ ಹೇರಿಕೆಯ ಯಾವುದೇ ಪ್ರಯತ್ನಗಳನ್ನು ಖಂಡಿಸಿರುವ ಕುರಿತಾದ ಪ್ರಶ್ನೆಗೆ ರಾವತ್ ಪ್ರತಿಕ್ರಿಯಿಸಿದರು.

“ಸದನದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಹಿಂದಿಯಲ್ಲಿ ಮಾತನಾಡುತ್ತೇನೆ. ಏಕೆಂದರೆ ನಾನು ಹೇಳುವುದನ್ನು ದೇಶ ಕೇಳಬೇಕು.  ಅದು ದೇಶದ ಭಾಷೆ. ಇಡೀ ದೇಶದಲ್ಲಿ ಸ್ವೀಕಾರಾರ್ಹತೆ ಹೊಂದಿರುವ ಮತ್ತು ಮಾತನಾಡುವ ಏಕೈಕ ಭಾಷೆ ಹಿಂದಿ ”ಎಂದು ಅವರು ಹೇಳಿದರು.

ಮುಂಬೈ ನಲ್ಲಿ  ಈ ವರ್ಷದ ಕೊನೆಯಲ್ಲಿ ಮಹಾನಗರ ಪಾಲಿಕೆಯ ಚುನಾವಣೆ ನಡೆಯುವ ಸಾಧ್ಯತೆಯಿದೆ. ಮುಂಬೈನಲ್ಲಿ ಹಿಂದಿ ಮಾತನಾಡುವ ಜನರು   ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾವತ್ ಹಿಂದಿ ಪರ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News