ಎಸ್‍ಡಿಪಿಐ, ಪಿಎಫ್‍ಐ 'ತೀವ್ರಗಾಮಿ' ಸಂಘಟನೆಗಳು, ಆದರೆ ನಿಷೇಧಿಸಲ್ಪಟ್ಟಿಲ್ಲ: ಕೇರಳ ಹೈಕೋರ್ಟ್
ತಿರುವನಂತಪುರಂ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಮತ್ತು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) 'ತೀವ್ರಗಾಮಿ ಸಂಘಟನೆ'ಗಳಾಗಿವೆ, ಆದರೆ ನಿಷೇಧಿತವಾಗಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
"ಎಸ್‍ಡಿಪಿಐ ಹಾಗೂ ಪಿಎಫ್‍ಐ ಗಂಭೀರ ಹಿಂಸಾಚಾರ ಪ್ರಕರಣಗಳಲ್ಲಿ ತೊಡಗಿಕೊಂಡಿರುವ ತೀವ್ರಗಾಮಿ ಸಂಘಟನೆಗಳೆಂಬುದರ ಕುರಿತು ಸಂಶಯವಿಲ್ಲ,'' ಎಂದು ಕಳೆದ ವರ್ಷ ಪಾಲಕ್ಕಾಡಿನಲ್ಲಿ ನಡೆದ ಆರಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ ಜಸ್ಟಿಸ್ ಕೆ ಹರಿಪಾಲ್ ಅಭಿಪ್ರಾಯ ಪಟ್ಟಿದ್ದಾರೆ.
ನ್ಯಾಯಾಲಯವು ತಮ್ಮ ಸಂಘಟನೆ ಕುರಿತು ವ್ಯಕ್ತಪಡಿಸಿದ ವ್ಯತಿರಿಕ್ತ ಅಭಿಪ್ರಾಯ ಕುರಿತು ಪ್ರತಿಕ್ರಿಯಿಸಿದ ಎಸ್‍ಡಿಪಿಐ, ನ್ಯಾಯಾಧೀಶರ ಅನಿಸಿಕೆಯನ್ನು ಕಡತಗಳಿಂದ ತೆಗೆದುಹಾಕುವಂತೆ ಮನವಿ ಮಾಡಲಾಗುವುದು ಎಂದಿದೆ.
"ಇದೊಂದು ಗಂಭೀರ ಹೇಳಿಕೆ. ಇಲ್ಲಿಯ ತನಕ ಯಾವುದೇ ತನಿಖಾ ಏಜನ್ಸಿಯು ಎಸ್‍ಡಿಪಿಐ ಕುರಿತು ಇಂತಹ ಹೇಳಿಕೆ ನೀಡಿಲ್ಲ. ಇಂತಹ ಹೇಳಿಕೆಯನ್ನು ಯಾವ ಆಧಾರದಲ್ಲಿ ಮಾಡಲಾಗಿದೆ?,'' ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಮುವತ್ತುಪುಝ ಅಶ್ರಫ್ ಮೌಲವಿ ಪ್ರಶ್ನಿಸಿದ್ದಾರೆ.
ಪಿಎಫ್‍ಐ ಕೂಡ ನ್ಯಾಯಾಲಯದ ಹೇಳಿಕೆ ಅಸಮರ್ಥನೀಯ ಎಂದು ಹೇಳಿದೆ. ಪಿಎಫ್‍ಐ ಕೂಡ ಎಸ್‍ಡಿಪಿಐನಂತೆ ಮನವಿ ಮಾಡಲಿದೆ ಎಂಬುದರ ಕುರಿತು ಸುಳಿವನ್ನು ಪಿಎಫ್‍ಐ ನಾಯಕ ಸಿ ಎ ರವೂಫ್ ನೀಡಿದ್ದಾರೆ.
ಆದರೆ ಸಂಘಪರಿವಾರ ಸಂಘಟನೆಗಳು ನ್ಯಾಯಾಲಯದ ಹೇಳಿಕೆಯನ್ನು ಸ್ವಾಗತಿಸಿವೆ ಹಾಗೂ ಪಿಎಫ್‍ಐ ಮತ್ತು ಎಸ್‍ಡಿಪಿಐ 'ಅಮಾನವೀಯ ದೇಶವಿರೋಧಿ ಚಟುವಟಿಕೆಗಳಲ್ಲಿ' ಶಾಮೀಲಾಗಿವೆ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದಿದೆ.
ಕಳೆದ ವರ್ಷದ ನವೆಂಬರ್ 15ರಂದು ನಡೆದ ಆರೆಸ್ಸೆಸ್ ಕಾರ್ಯಕರ್ತ ಎ ಸಂಜಿತ್ (27) ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ಇದಾಗಿತ್ತು.
ಈ ಪ್ರಕರಣದ ಆರೋಪಿಗಳನ್ನು ಗುರುತಿಸಲಾಗಿದೆ ಹಾಗೂ ಹಲವರನ್ನು ಬಂಧಿಸಲಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ, ಈ ಹಂತದಲ್ಲಿ ಸಿಬಿಐ ತನಿಖೆಗೆ ಹಸ್ತಾಂತರಿಸಿದರೆ ವಿಚಾರಣೆ ಇನ್ನಷ್ಟು ವಿಳಂಬಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟಿದೆ.