ಜೆಎನ್‍ಯು ತಮ್ಮ ಭದ್ರಕೋಟೆಯೆಂದೇ ತಿಳಿದುಕೊಂಡಿದ್ದ 'ಪ್ರಗತಿಪರರಿಗೆ' ನನ್ನ ನೇಮಕಾತಿ ಖುಷಿ ನೀಡಿರಲಿಲ್ಲ: ಉಪಕುಲಪತಿ

Update: 2022-05-14 11:17 GMT
ಶಾಂತಿಶ್ರೀ ಡಿ ಪಂಡಿತ್ (Photo: mei.org.in)

ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವನು ತಮ್ಮ ಭದ್ರಕೋಟೆಯೆಂದೇ ವರ್ಷಗಳ ಕಾಲ ತಿಳಿದುಕೊಂಡಿದ್ದ 'ಪ್ರಗತಿಪರರಿಗೆ'  ಉಪಕುಲಪತಿಯಾಗಿ ನನ್ನ ನೇಮಕವು ಖುಷಿ ನೀಡಿಲ್ಲ ಎಂದು ಈ ವರ್ಷದ ಫೆಬ್ರವರಿಯಲ್ಲಿ ಜೆಎನ್‍ಯು ಉಪಕುಲಪತಿಯಾಗಿ  ಅಧಿಕಾರ ವಹಿಸಿಕೊಂಡಿರುವ ಶಾಂತಿಶ್ರೀ ಡಿ ಪಂಡಿತ್ ಅವರು ಅಭಿಪ್ರಾಯಪಟ್ಟಿದ್ದಾರೆ ಎಂದು theprint.in ವರದಿ ಮಾಡಿದೆ.

"ಹಿಂದಿಯೇತರ ಹಿಂದುಳಿದ ವರ್ಗದ ಮಹಿಳೆಯಾಗಿರುವ ನನ್ನನ್ನು ಉಪಕುಲಪತಿಯಾಗಿ ನೇಮಕಗೊಳಿಸಿ ನರೇಂದ್ರ ಮೋದಿ ಸರಕಾರ ಹಲವಾರು ತಡೆಗೋಡೆಗಳನ್ನು ಮುರಿದಿದೆ,'' ಎಂದು ಅವರು ಹೇಳಿದ್ದಾರೆ.

"ವಿಶ್ವವಿದ್ಯಾಲಯವು ರೂ. 130 ಕೋಟಿಯಷ್ಟು ಹಣಕಾಸು ಕೊರತೆ ಎದುರಿಸುತ್ತಿದೆ ಈ ನಿಟ್ಟಿನಲ್ಲಿ ವಿವಿ ತನ್ನದೇ ಆದ ಹಣಕಾಸು ಸಂಪನ್ಮೂಲ ಕ್ರೋಢೀಕರಣ ನಡೆಸುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ,'' ಎಂದು ಅವರು ಹೇಳಿದರು.

ಬಿಜೆಪಿ ಸರಕಾರವನ್ನು ಬೆಂಬಲಿಸಿ ಹಾಗೂ ಜೆಎನ್‍ಯು ವಿದ್ಯಾರ್ಥಿಗಳನ್ನು ಟೀಕಿಸಿ ಅವರು ಹಿಂದೆ ಮಾಡಿದ ಟ್ವೀಟ್‍ಗಳು ಅವರು ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಿಗೇ ಸುದ್ದಿಯಾಗಿದ್ದವು. ಆದರೆ ತಾನು ಯಾವತ್ತೂ ಟ್ವಿಟರ್ ಖಾತೆ ಹೊಂದಿರಲಿಲ್ಲ ಎಂದು ಆಗ ಅವರು ವಾದಿಸಿದ್ದರಲ್ಲದೆ ಜೆಎನ್‍ಯುವಿನ ಯಾರಾದರೊಬ್ಬರು ಈ ವಿವಾದ ಹುಟ್ಟುಹಾಕಿರಬಹುದು ಎಂದಿದ್ದರು.

ಜೆಎನ್‍ಯುವಿನಲ್ಲಿ 'ಟುಕ್ಡೇ ಟುಕ್ಡೇ ಗ್ಯಾಂಗ್' ಇದೆ ಎಂಬ ಆರೋಪವನ್ನು ನಿರಾಕರಿಸಿದ್ದ ಅವರು, ಪ್ರತಿಯೊಂದು ವಿವಿಯಲ್ಲಿ ಇಂತಹ ಕೆಲ ಶಕ್ತಿಗಳಿದ್ದರೂ ಆ ಶಕ್ತಿಗಳು ಇಡೀ ವಿವಿಯನ್ನು ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News