ಅಮೃತಸರದ ಸರಕಾರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬೆಂಕಿ ಅವಘಡ
Update: 2022-05-14 23:44 IST
ಅಮೃತಸರ, ಮೇ 14: ಅಮೃತಸರದ ಮಜಿತಾ ರಸ್ತೆಯಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನ ಗುರು ನಾನಕ್ ದೇವ್ ಆಸ್ಪತ್ರೆಯ ಕಟ್ಟಡದ ಕಾರು ಪಾರ್ಕಿಂಗ್ ಸ್ಥಳದಲ್ಲಿದ್ದ ಇಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡ ಪರಿಣಾಮ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಆಸ್ಪತ್ರೆಯ ಎಕ್ಸ್‌ರೇ ವಿಭಾಗದ ಹಿಂದೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲಿ ಹಲವು ರೋಗಿಗಳನ್ನು ರಕ್ಷಿಸಲಾಗಿದೆ. ಅಗ್ನಿ ಶಾಮಕ ದಳ ಕೂಡಲೇ ಸ್ಥಳಕ್ಕೆ ಧಾವಿಸಿದೆ ಹಾಗೂ ಬೆಂಕಿಯನ್ನು ಹತೋಟಿಗೆ ತಂದಿದೆ. ‘‘ಬೆಂಕಿ ಆಸ್ಪತ್ರೆಯ ಇತರ ಭಾಗಗಳಿಗೆ ಹರಡುವುದನ್ನು ನಿಲ್ಲಿಸಲಾಗಿದೆ’’ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.