ಕಾರು ಅಪಘಾತ: ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಆ್ಯಂಡ್ರೂ ಸೈಮಂಡ್ಸ್ ಮೃತ್ಯು

Update: 2022-05-15 01:50 GMT
 ಆ್ಯಂಡ್ರೂ ಸೈಮಂಡ್ಸ್ (Photo: Twitter)

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಮತ್ತು ಆಲ್‍ರೌಂಡರ್ ಆ್ಯಂಡ್ರೂ ಸೈಮಂಡ್ಸ್ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವರದಿಗಳು ಮತ್ತು ಸಹ ಆಟಗಾರರು ರವಿವಾರ ಬಹಿರಂಗಪಡಿಸಿದ್ದಾರೆ. ಶೇನ್ ವಾರ್ನ್ ಹಾಗೂ ರಾಡ್ ಮಾರ್ಷ್ ಅವರಂಥ ಸ್ಟಾರ್ ಆಟಗಾರರು ಅಕಾಲಿಕವಾಗಿ ಮೃತಪಟ್ಟ ಬಳಿಕ ಇನ್ನೊಂದು ಇಂಥ ದುರಂತ ಅಧ್ಯಾಯಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ.

46 ವರ್ಷ ವಯಸ್ಸಿನ ಸೈಮಂಡ್ಸ್ 26 ಟೆಸ್ಟ್ ಹಾಗೂ 198 ಏಕದಿನ ಪಂದ್ಯಗಳನ್ನು ಆಡಿದ್ದರು. ಶನಿವಾರ ರಾತ್ರಿ ಕ್ವೀನ್ಸ್‍ಲ್ಯಾಂಡ್‍ನ ಟೌನ್ಸ್‍ವಿಲ್ ಪಟ್ಟಣದ ಹೊರವಲಯದಲ್ಲಿ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದಾಗಿ ಪ್ರಕಟಿಸಲಾಗಿದೆ.

ಪೊಲೀಸರು ಮತ್ತು ತುರ್ತು ಸೇವಾ ವಿಭಾಗದ ಸಿಬ್ಬಂದಿ ಕಾರಿನ ಚಾಲಕ ಮತ್ತು ಏಕೈಕ ಪ್ರಯಾಣಿಕನ ಜೀವರಕ್ಷಣೆಗೆ ಪ್ರಯತ್ನಿಸಿದರೂ, ಕಾರು ಉರುಳಿಬಿದ್ದಾಗ ಉಂಟಾದ ಗಂಭೀರ ಗಾಯಗಳಿಂದ ಸೈಮಂಡ್ಸ್ ಮೃತಪಟ್ಟರು. ಅಧಿಕಾರಿಗಳು ಸೈಮಂಡ್ಸ್ ಅವರ ಗುರುತನ್ನು ಇನ್ನೂ ದೃಢಪಡಿಸಿಲ್ಲವಾದರೂ, ಹಲವು ಮಾಧ್ಯಮ ಹಾಗೂ ಮಾಜಿ ಆಟಗಾರರು ಸೈಮಂಡ್ಸ್ ಅವರ ಚಹರೆ ದೃಢಪಡಿಸಿದ್ದಾರೆ.

"ಮುಂಜಾನೆ ಎಚ್ಚರವಾಗುವಾಗಲೇ ಭಯಾನಕ ಸುದ್ದಿ" ಎಂದು ಮಾಜಿ ಆಟಗಾರ ಜೇಸನ್ ಗಿಲೆಪ್ಸಿ ಟ್ವೀಟ್ ಮಾಡಿದ್ದಾರೆ. "ನಾವು ಕಂಗೆಟ್ಟಿದ್ದೇವೆ. ನಿಮ್ಮನ್ನು ಎಲ್ಲ ಸಹ ಆಟಗಾರರು ಕಳೆದುಕೊಂಡಿದ್ದೇವೆ" ಎಂದು ಅವರು ಕಂಬನಿ ಮಿಡಿದಿದ್ದಾರೆ.

ಮತ್ತೊಬ್ಬ ಸಹ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆ್ಯಡಮ್ ಗಿಲ್‍ಕ್ರಿಸ್ಟ್ ಅವರು, ಇದು ನಿಜಕ್ಕೂ ಖೇದಕರ ಎಂದು ಶೋಕಿಸಿದ್ದಾರೆ. ಪಾಕಿಸ್ತಾನಿ ವೇಗದ ಬೌಲರ್ ಶೋಯಿಬ್ ಅಖ್ತರ್ ಕೂಡಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಸೈಮಂಡ್ಸ್ ಆಸ್ಟ್ರೇಲಿಯಾ ಕ್ರಿಕೆಟ್‍ನ ಅತ್ಯಂತ ಕೌಶಲಯುಕ್ತ ಆಲ್‍ರೌಂಡರ್ ಎನಿಸಿಕೊಂಡಿದ್ದರು. 2003 ಮತ್ತು 2007ರ ವಿಶ್ವಕಪ್ ಏಕದಿನ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News