ಇಂಗ್ಲಿಷ್ ಎಫ್‍ಎ ಕಪ್ ಗೆದ್ದ ಲಿವರ್‍ಪೂಲ್

Update: 2022-05-15 03:14 GMT
Photo credit: Twitter/ @VirgilvDijk

ಲಂಡನ್: ಚೆಲ್ಸಿ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 6-5 ಗೋಲುಗಳಿಂದ ಸೋಲಿಸುವ ಮೂಲಕ ಲಿವರ್‍ಪೂಲ್ ತಂಡ ಪ್ರತಿಷ್ಠಿತ ಇಂಗ್ಲಿಷ್ ಎಫ್‍ಎ ಕಪ್ ಗೆದ್ದಿದೆ. ವಾಂಬ್ಲೆಯಲ್ಲಿ ನಡೆದ ರೋಚಕ ಪಂದ್ಯ ಹೆಚ್ಚುವರಿ ಅವಧಿಯ ಬಳಿಕವೂ 0-0 ಸಮಬಲದಲ್ಲಿ ಅಂತ್ಯಗೊಂಡ ಬಳಿಕ ವಿಜೇತರ ನಿರ್ಣಯಕ್ಕೆ ಪೆನಾಲ್ಟಿ ಶೂಟೌಟ್ ನಡೆಸಲಾಯಿತು.

ಚೆಲ್ಸಿಯಾ ನಾಯಕ ಸೀಸರ್ ಅಝ್ಫಿಲಿಕ್ಯುಟಿಯಾ ಕಂಬಕ್ಕೆ ಚೆಂಡು ಹೊಡೆದು, ಮ್ಯಾಸನ್ ಮೌಂಟ್ ಅವರ ಪ್ರಯತ್ನವನ್ನು ಅಲಿಸನ್ ವಿಫಲಗೊಳಿಸಿದ ಬಳಿಕ ಬದಲಿ ಆಟಗಾರ ಕೋಸ್ಟಸ್ ಸಿಮಿಕಾಸ್ ಗೆಲುವಿನ ಪೆನಾಲ್ಟಿ ಹೊಡೆದರು.

ಚೆಲ್ಸಿಯಾ ಗೋಲ್‍ಕೀಪರ್ ಎಡ್ವರ್ಡ್ ಮೆಂಡಿ ಅವರು ಸಾಡಿಯೊ ಮಾನೆ ಅವರ ಪೆನಾಲ್ಟಿಯನ್ನು ವಿಫಲಗೊಳಿಸಿ ತಮ್ಮ ತಂಡದ ಆಸೆಯನ್ನು ಜೀವಂತ ಇರಿಸಿದ್ದರು. ಆದರೆ ಅಂತಿಮವಾಗಿ ಗೆಲುವಿನ ನಗೆಬೀರಿದ ಲಿವರ್‍ಪೂಲ್ 2006ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತು. 

ಶನಿವಾರದ ಗೆಲುವಿನಿಂದ ಲಿವರ್‍ಪೂಲ್ ಸತತ ನಾಲ್ಕು ಟ್ರೋಫಿಗಳನ್ನು ಗೆಲ್ಲುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರಿಮಿಯರ್ ಲೀಗ್ ರೇಸ್‍ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡಕ್ಕಿಂತ ಮೂರು ಅಂಕಗಳಷ್ಟು ಹಿಂದಿರುವ ಲಿವರ್‍ಪೂಲ್‍ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಈ ತಿಂಗಳ 28ರಂದು ನಡೆಯುವ ಚಾಂಪಿಯನ್ಸ್ ಲೀಗ್ ಫೈನಲ್‍ನಲ್ಲಿ ರಿಯಲ್ ಮ್ಯಾಡ್ರಿಡ್‍ನ ಸವಾಲು ಎದುರಿಸಲಿದೆ.

"ನಮ್ಮ ಹುಡುಗರ ಬಗ್ಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ" ಎಂದು ಲಿವರ್‍ಪೂಲ್ ತಮಡ್ ವ್ಯವಸ್ಥಾಪಕ ಜೆರ್ಗನ್ ಕ್ಲೋಪ್ ಪ್ರತಿಕ್ರಿಯಿಸಿದ್ದಾರೆ. "ಚೆಲ್ಸಿ ತಂಡ ನಿಜಕ್ಕೂ ಅದ್ಭುತ ಪ್ರದರ್ಶನ ನೀಡಿತು. ಆದರೆ ಕೊನೆಗೆ ಒಂದೇ ತಂಡ ಗೆಲ್ಲಲು ಸಾಧ್ಯ; ಇಂದು ನಾವು ವಿಜೇತರಾದೆವು" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News