ಎಂಎಸ್‌ಯು ವಿವಿಯಲ್ಲಿ ಹಿಂದುತ್ವ ಕಾರ್ಯಕರ್ತರಿಂದ ಹಲ್ಲೆ, ದಾಂಧಲೆ ಪ್ರಕರಣ: ಕಠಿಣ ಕ್ರಮಕ್ಕೆ ಹಳೆ ವಿದ್ಯಾರ್ಥಿಗಳ ಆಗ್ರಹ

Update: 2022-05-15 14:40 GMT
ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯ ಕ್ಯಾಂಪಸ್.‌ Photo: University Website.

ಅಹಮದಾಬಾದ್: ಬರೋಡಾದ ಪ್ರತಿಷ್ಠಿತ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದ (MSU)  ಕಲಾ ವಿಭಾಗದ ಹಳೆಯ ವಿದ್ಯಾರ್ಥಿಗಳ ಗುಂಪು, ಮೇ 5 ರಂದು ಪರೀಕ್ಷೆಗಳು ನಡೆಯುತ್ತಿರುವಾಗ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪಿತ ಸಂಘಪರಿವಾರ ತಂಡದ ವಿರುದ್ಧ “ತಕ್ಷಣದ ಕ್ರಮ” ಕ್ಕೆ ಒತ್ತಾಯಿಸಿ ಉಪಕುಲಪತಿಗಳಿಗೆ ಪತ್ರ ಬರೆದಿದ್ದಾರೆ. ವಿದ್ಯಾರ್ಥಿ ಸಂಘದಿಂದ ಚುನಾಯಿತ ಪ್ರತಿನಿಧಿಗಳು, ಅಧ್ಯಾಪಕರು ಮತ್ತು ಹಳೆಯ ವಿದ್ಯಾರ್ಥಿಗಳನ್ನೊಳಗೊಂಡ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಅವರು ಕೋರಿದ್ದಾಗಿ Thewire.in ವರದಿ ಮಾಡಿದೆ.

ಮೇ 5 ರ ದಾಳಿಯ ನಂತರ, ವಿಶ್ವವಿದ್ಯಾಲಯವು ಈ ವಿಷಯವನ್ನು ಪರಿಶೀಲಿಸಲು ಒಂಬತ್ತು ಸದಸ್ಯರ ಸತ್ಯಶೋಧನಾ ತಂಡವನ್ನು ರಚಿಸಿತ್ತು. ಸ್ಥಳೀಯ ಬಿಜೆಪಿ ನಾಯಕ ಮತ್ತು ಆರ್‌ಎಸ್‌ಎಸ್ ವಿದ್ಯಾರ್ಥಿ ವಿಭಾಗದ ಮಾಜಿ ಸದಸ್ಯ ಹಷ್ಮುಖ್ ವಘೇಲಾ ಅವರು ಹಿಂದೂ ಜಾಗರಣ್ ಮಂಚ್ ನಾಯಕರೊಂದಿಗೆ ದಾಳಿಕೋರ ಗುಂಪನ್ನು ಮುನ್ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಪರೀಕ್ಷೆಗಳು ನಡೆಯುತ್ತಿರುವಾಗ ಕ್ಯಾಂಪಸ್‌ನೊಳಗೆ ಸ್ಥಳೀಯ ಬಿಜೆಪಿ ನಾಯಕ ಬಂದು ಹೇಗೆ ಹಿಂಸೆಯಿಂದ ಕೂಡಿದ ಮೆರವಣಿಗೆಯನ್ನು ನಡೆಸಬಹುದು ಎಂದು ಪ್ರಶ್ನಿಸಿದ ಹಳೆಯ ವಿದ್ಯಾರ್ಥಿಗಳು, ಕ್ಯಾಂಪಸ್‌ನಲ್ಲಿ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಮಾಡಬೇಕೆಂದು ಮನವಿ ಮಾಡಿದ್ದಾರೆ. 

ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ, “ಈ ರೀತಿಯ ದಾಳಿಯು ನಮ್ಮ ದೇಶದ ಸಾಂಸ್ಕೃತಿಕ ರಚನೆ ಮತ್ತು ಪ್ರಜಾಸತ್ತಾತ್ಮಕ ನೀತಿಯ ಬಗ್ಗೆ ಕಾಳಜಿ ವಹಿಸುವ ಕಲಾ ವಿದ್ಯಾರ್ಥಿಗಳು, ಈ ದೇಶದ ನಾಗರಿಕರು ಮತ್ತು ನಮಗೆಲ್ಲರಿಗೂ ಆತಂಕಕಾರಿಯಾಗಿ ಪರಿಣಮಿಸಬೇಕು” ಎಂದು ಹಳೆಯ ವಿದ್ಯಾರ್ಥಿಗಳ ಗುಂಪು ಹೇಳಿದೆ. 

“ನಾವು, ಲಲಿತಕಲಾ ವಿಭಾಗದ ಹಳೆಯ ವಿದ್ಯಾರ್ಥಿಗಳು, ನಮ್ಮ ಅಲ್ಮಾ ಮೇಟರ್‌ನಲ್ಲಿ (ಈ ಹಿಂದೆ ಕಲಿತ ಸಂಸ್ಥೆಯಲ್ಲಿ) ಗುಂಪೊಂದು ನಡೆಸಿದ ಹಿಂಸಾಚಾರದ ಕುರಿತು ನಮ್ಮ ಖಂಡನೆಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇವೆ. ನಮ್ಮ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಪ್ರಸ್ತುತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ನಾವು ಖಂಡಿಸುತ್ತೇವೆ, ”ಎಂದು ಹಳೆಯ ವಿದ್ಯಾರ್ಥಿಗಳ ಹೇಳಿಕೆ ತಿಳಿಸಿದೆ.

 ವಡೋದರಾ ಮೂಲದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದ ಲಲಿತಕಲಾ ವಿಭಾಗದ ಪ್ರದರ್ಶನದಲ್ಲಿ ಕೆಲವು ವಿದ್ಯಾರ್ಥಿಗಳು ಹಿಂದೂ ದೇವರು ಮತ್ತು ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶಿಸಿದ್ದಾರೆಂದು ಆರೋಪಿಸಿ ಕಳೆದ ವಾರ ಸಂಘಪರಿವಾರದ ಬಲಪಂಥೀಯ ಕಾರ್ಯಕರ್ತರು ಕ್ಯಾಂಪಸ್‌ ಆವರಣದಲ್ಲಿ ದಾಂಧಲೆ ನಡೆಸಿದ್ದರು. ಇದೇ ವೇಳೆ ಅಧ್ಯಾಪಕರ ಮೇಲೆ ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಕೂಡಾ ನಡೆದಿದೆ ಎಂದು ಆರೋಪಿಸಲಾಗಿದೆ ಎಂದು ವರದಿ ತಿಳಿಸಿದೆ.

ಅತ್ಯಾಚಾರದ ಸುದ್ದಿ ತುಣುಕುಗಳನ್ನು ಬಳಸಿಕೊಂಡು ಹಿಂದೂ ದೇವತೆಗಳ ಪ್ರತಿಮೆ ಚಿತ್ರಣವನ್ನು ಸೃಷ್ಟಿಸುವುದು ನಾಚಿಕೆಗೇಡಿನ ಸಂಗತಿ ಎಂದು ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ಎಬಿವಿಪಿ ಹೇಳಿದೆ. ಇದಲ್ಲದೆ ಹಿಂದೂ ದೇವತೆಗಳ ಛಾಯಾಚಿತ್ರಗಳ ಹಿಂದೆ ಅತ್ಯಾಚಾರದ ಸುದ್ದಿ ತುಣುಕುಗಳನ್ನು ಸೇರಿಸಿರುವುದು ಖಂಡನೀಯ, ಅದು ಕಲೆಯಲ್ಲ ಎಂದು ಬಲಪಂಥೀಯ ಕಾರ್ಯಕರ್ತರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News