ಶ್ರೀಲಂಕಾದ ಮೇಲೆ ದಾಳಿಗೆ ಎಲ್‌ಟಿಟಿ ಸಂಚು ರೂಪಿಸಿದೆ ಎಂಬ ಭಾರತೀಯ ಮಾಧ್ಯಮದ ವರದಿಯ ಬಗ್ಗೆ ತನಿಖೆ: ರಕ್ಷಣಾ ಇಲಾಖೆ

Update: 2022-05-15 14:41 GMT
Photo: PTI

ಕೊಲಂಬೊ, ಮೇ 15: ಮೇ 18ರಂದು ದೇಶದ ಮೇಲೆ ದಾಳಿ ನಡೆಸಲು ಎಲ್ಟಿಟಿಇ ಯೋಜನೆ ರೂಪಿಸಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಯ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ದ್ವೀಪರಾಷ್ಟ್ರದಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಶ್ರೀಲಂಕಾ ರವಿವಾರ ಹೇಳಿದೆ.

2009ರಲ್ಲಿ ಶ್ರೀಲಂಕಾದ ಅಂತರ್ಯುದ್ಧ ಅಂತ್ಯಗೊಂಡ ವಾರ್ಷಿಕ ದಿನಾಚರಣೆ ಮೇ 18ರಂದು ನಡೆಯಲಿದ್ದು ( ಮುಲ್ಲಿವೈಕಲ್ ದಿನಾಚರಣೆ ) ಆಗ ನಿಷೇಧಿತ ಸಂಘಟನೆ ಎಲ್ಟಿಟಿಇ(ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಶ್ರೀಲಂಕಾದ ಮೇಲೆ ದಾಳಿಗೆ ಸಂಚು ರೂಪಿಸಿದೆ ಎಂದು ‘ದಿ ಹಿಂದು’ ದಿನಪತ್ರಿಕೆ ಮೇ 13ರಂದು ವರದಿ ಪ್ರಕಟಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಇಲಾಖೆ ಹೇಳಿದೆ.

ಮೇಲಿನ ವರದಿಯ ಬಗ್ಗೆ ವಿಚಾರಿಸಿದ ಬಳಿಕ ‘ಮಾಹಿತಿಯನ್ನು ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು ಮತ್ತು ಅದರ ಬಗ್ಗೆ ಶ್ರೀಲಂಕಾಕ್ಕೆ ತಿಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭಾರತದ ಗುಪ್ತಚರ ಇಲಾಖೆ ತಿಳಿಸಿದೆ . ಆದರೂ, ಮೇಲಿನ ವರದಿ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿ ಗುಪ್ತಚರ ಇಲಾಖೆ ಮತ್ತು ಭದ್ರತಾ ಪಡೆಗೆ ಲಭಿಸುವ ಮಾಹಿತಿಯನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು . ಜೊತೆಗೆ, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಲಂಕಾದ ರಕ್ಷಣಾ ಇಲಾಖೆ ಹೇಳಿದೆ.

   ಈ ಮಧ್ಯೆ, ಅಕ್ರಮ ಗುಂಪುಗೂಡುವಿಕೆ, ಹಿಂಸಾತ್ಮಕ ಗುಂಪುಗಳು, ಸಾರ್ವಜನಿಕ, ಖಾಸಗಿ ಆಸ್ತಿಗೆ ಹಾನಿಮಾಡುವುದು, ದೊಂಬಿ . ಲೂಟಿಯಲ್ಲಿ ತೊಡಗಿರುವ ಯಾವುದೇ ಕ್ರಿಮಿನಲ್ ಕೃತ್ಯಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ಮಂಗಳವಾರ ಜಾರಿಗೊಳಿಸಿರುವ ವಿಶೇಷ ಹೇಳಿಕೆಯಲ್ಲಿ ರಕ್ಷಣಾ ಇಲಾಖೆ ಕೋರಿದೆ. ಹಿಂಸಾತ್ಮಕ ಪ್ರತಿಭಟನೆ ಉಲ್ಬಣಿಸಿದ್ದರಿಂದ ದ್ವೀಪರಾಷ್ಟ್ರದಲ್ಲಿ 2 ಬಾರಿ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಸರಕಾರ ವಿರೋಧಿ ಪ್ರತಿಭಟನೆಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಸ್ಥಿತಿಯನ್ನು ಬಳಸಿಕೊಂಡು, ಅಂತರಾಷ್ಟ್ರೀಯ ಸಂಪರ್ಕದೊಂದಿಗೆ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಶ್ರೀಲಂಕಾ ತಮಿಳರ ಕೆಲವು ವರ್ಗದವರು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ದಿ ಹಿಂದು ದಿನಪತ್ರಿಕೆ ಶುಕ್ರವಾರ ವರದಿ ಮಾಡಿತ್ತು.

ಮೇ 18ರಂದು ನಡೆಯುವ ಮುಲ್ಲಿವೈಕಲ್ ವಾರ್ಷಿಕೋತ್ಸವ ಸಂದರ್ಭದಲ್ಲಿ ದಾಳಿಗೆ ಯೋಜನೆ ರೂಪಿಸಿರುವ ಜತೆಗೆ, ತಮ್ಮ ಮುಖಂಡ ವಿ ಪ್ರಭಾಕರನ್, ಸುದ್ಧಿವಾಚಕಿ ಇಸೈ ಪ್ರಿಯಾ ಹಾಗೂ ಇತರರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಾಜಿ ಎಲ್ಟಿಟಿಇ ಹೋರಾಟಗಾರರು ಸಂಚು ರೂಪಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಮೀಸಲು ನಿಧಿ ಕನಿಷ್ಟ ಮಟ್ಟಕ್ಕೆ ಇಳಿದಿದ್ದು ದೈನಂದಿನ ಬಳಕೆಯ ವಸ್ತುಗಳ ಆಮದಿಗೆ ತೊಡಕಾಗಿದೆ. ಆಹಾರಧಾನ್ಯ, ಔಷಧ, ಹಾಲಿನ ಪುಡಿ, ಇಂಧನ, ಅಡುಗೆ ಅನಿಲ ಇತ್ಯಾದಿಗಳ ಕೊರತೆ ಗರಿಷ್ಟ ಮಟ್ಟಕ್ಕೇರಿದೆ. ಇದನ್ನು ವಿರೋಧಿಸಿ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಒತ್ತಡಕ್ಕೆ ಮಣಿದ ಮಹಿಂದಾ ರಾಜಪಕ್ಸ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News