ಉಡುಪಿ: ಡಿಎನ್ಎಗಾಗಿ ದಫನ ಮಾಡಿದ್ದ ಮೃತದೇಹದ ಮಾದರಿ ಸಂಗ್ರಹಿಸಿದ ಪಂಜಾಬ್ ಪೊಲೀಸರು

Update: 2022-05-15 17:12 GMT

ಉಡುಪಿ : ಒಂದೂವರೆ ವರ್ಷಗಳ ಹಿಂದೆ ಬೀಡಿನಗುಡ್ಡೆ ರುದ್ರ ಭೂಮಿಯಲ್ಲಿ ಅಪರಿಚಿತ ವ್ಯಕ್ತಿಯ ನೆಲೆಯಲ್ಲಿ ಧಪನ ಮಾಡಲಾದ ಪಂಜಾಬ್ ಮೂಲದ ವ್ಯಕ್ತಿಯ ಮೃತದೇಹವನ್ನು ಪಂಜಾಬ್ ಪೊಲೀಸರು ಹೆಚ್ಚಿನ ತನಿಖೆ ಗಾಗಿ ಹೊರ ತೆಗೆಸಿ, ಮಾದರಿ ಸಂಗ್ರಹಿಸಿರುವ ಬಗ್ಗೆ ವರದಿಯಾಗಿದೆ.

ಪಂಜಾಬ್ ರಾಜ್ಯದ ಸದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜೇಂದ್ರ ಸಿಂಗ್(31) ಎಂಬವರು 2020ರ ಡಿಸೆಂಬರ್ ತಿಂಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವ ಸಂಬಂಧ ಮಂಗಳೂರಿಗೆ ಹೊರಟಿದ್ದರು. ಬಳಿಕ ಅವರು ತನ್ನ ಮನೆಯವರಿಗೆ ಡಿ.15ರಂದು ಕರೆ ಮಾಡಿ ತಾನು ಮಂಗಳೂರಿನಲ್ಲಿ ಇರುವುದಾಗಿ ಹೇಳಿದ್ದರು. ಅದರ ನಂತರ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಮನೆಯವರು ಸದಾರ್ ಪೊಲೀಸ್ ಠಾಣೆಯಲ್ಲಿ ತೇಜೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಅಪಹರಿಸಿರುವುದಾಗಿ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಅಲ್ಲಿನ ಪೊಲೀಸರಿಗೆ ಇದೊಂದು ಕೊಲೆ ಎಂಬುದಾಗಿ ತನಿಖೆಯಿಂದ ಕಂಡುಬಂತು. ಅದರಂತೆ ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಅಲ್ಲಿನ ಪೊಲೀಸರು ತನಿಖೆ ತೀವ್ರಗೊಳಿಸಿದರು.

ಮಂಗಳೂರಿಗೆ ಆಗಮನ: ತೇಜೇಂದ್ರ ಅವರ ಫೋನ್ ಕರೆಯ ಜಾಡು ಹಿಡಿದುಕೊಂಡು ಮಂಗಳೂರಿಗೆ ಆಗಮಿಸಿದ ಪಂಜಾಬ್ ಪೊಲೀಸರು, ಮಂಗಳೂರು ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪತ್ತೆ ಯಾಗಿದ್ದ ಅಪರಿಚಿತ ಮೃತದೇಹಗಳ ಫೋಟೋ ವನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮೃತದೇಹವು ತೇಜೇಂದ್ರ ಸಿಂಗ್ ಫೋಟೋದೊಂದಿಗೆ ಹೋಲಿಕೆ ಆಗಿತ್ತು. ಹೀಗೆ ಮೃತದೇಹ ವನ್ನು ಪತ್ತೆ ಹಚ್ಚಿದ ಪೊಲೀಸರು, ಮಲ್ಪೆಗೆ ಆಗಮಿಸಿ ವಿಚಾರಿಸಿದರು. ಆಗ ಆ ಮೃತದೇಹವನ್ನು ದಫನ ಮಾಡಿರುವುದು ತಿಳಿದುಬಂತು.

ಮೃತದೇಹ ಹೊರಕ್ಕೆ: ಹೆಚ್ಚಿನ ತನಿಖೆ ಹಿನ್ನೆಲೆಯಲ್ಲಿ ರುದ್ರಭೂಮಿಯಲ್ಲಿ ಧಪನ ಮಾಡಲಾಗಿದ್ದ ಮೃತದೇಹವನ್ನು ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಶನಿವಾರ ಹೊರ ತೆಗೆಯಲಾಯಿತು.

ಡಿಎನ್‌ಎ ಮೂಲಕ ಈ ಮೃತದೇಹವು ತೇಜೇಂದ್ರ ಸಿಂಗ್ ಅವರದ್ದೆಯೇ ಎಂಬುದು ದೃಢಪಡಿಸಲು ಪಂಜಾಬ್ ಪೊಲೀಸರು, ಅಸ್ಥಿಪಂಜರದ ಕೆಲವೊಂದು ಮೂಳೆ ಹಾಗೂ ಮಾದರಿಯನ್ನು ಸಂಗ್ರಹಿಸಿದರು. ಇದನ್ನು ಇವರು ಪಂಜಾಬ್ ರಾಜ್ಯಕ್ಕೆ ಕೊಂಡೊಯ್ದು ಡಿಎಎನ್ ಪರೀಕ್ಷೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಮಲ್ಪೆ ಎಸ್ಸೈ ಶಕ್ತಿವೇಲು ಹಾಜರಿದ್ದರು. ಮೃತದೇಹ ಹೊರ ತೆಗೆಯಲು ಉಡುಪಿ ನಗರಸಭೆ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಸಹಕರಿಸಿದರು. ಮೃತದೇಹವನ್ನು ದಫನ ಮಾಡುವ ಮೊದಲು ಮರಣೋತ್ತರ ಪರೀಕ್ಷೆಗೆ ಒಳ ಪಡಿಸಿದ್ದರೂ ಸಾವಿಗೆ ಕಾರಣ ತಿಳಿದುಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅಪರಿಚಿತ ಶವವಾಗಿ ಪತ್ತೆ

ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಸಮೀಪದ ಮೂಡು ಕುದ್ರುವಿನ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹವೊಂದು 2020ರ ಡಿ.16ರಂದು ಪತ್ತೆಯಾಗಿತ್ತು. ಈ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು.

ಆದರೆ ಮೃತರ ವಾರಸುದಾರರು ಯಾರು ಕೂಡ ಪೊಲೀಸ್ ಠಾಣೆಯನ್ನು ಸಂಪರ್ಕಿಸದ ಕಾರಣಕ್ಕಾಗಿ ಅಜ್ಜರಕಾಡು ಶವಗಾರದಲ್ಲಿದ್ದ ಈ ಮೃತದೇಹವನ್ನು ಮಲ್ಪೆ ಪೊಲೀಸರು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ಧಪನ ಮಾಡಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು. ಇದೀಗ ಈ ಮೃತದೇಹ ತೇಜೇಂದ್ರ ಸಿಂಗ್ ಅವರದ್ದು ಎಂಬುದಾಗಿ ಪಂಜಾಬ್ ಪೊಲೀಸರಿಂದ ಬೆಳಕಿಗೆ ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News