‘ಒಂದೇ ಕುಟುಂಬ, ಒಂದು ಟಿಕೆಟ್’ ನೀತಿ ಅಂಗೀಕರಿಸಿದ ಕಾಂಗ್ರೆಸ್

Update: 2022-05-15 17:29 GMT
Photo: PTI

ಉದಯಪುರ ,ಮೇ 15: ಮುಂದಿನ ಸುತ್ತಿನ ವಿಧಾನಸಭಾ ಹಾಗೂ 2023ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರವಿವಾರ ‘ ಒಂದು ಕುಟುಂಬ, ಒಂದೇ ಟಿಕೆಟ್’ ನೀತಿ ಸೇರಿದಂತೆ ವಿವಿಧ ಸಾಂಸ್ಥಿಕ ಸುಧಾರಣಾ ಕ್ರಮಗಳನ್ನು ಅಂಗೀಕರಿಸಿತು. ಈ ನೀತಿಯ ಪ್ರಕಾರ ಒಂದೇ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಬಹುದಾಗಿದೆ.

     ಉದಯಪುರದಲ್ಲಿ ನಡೆಯುತ್ತಿರುವ ಚಿಂತನಾಶಿಬಿರದಲ್ಲಿ ಈ ಸುಧಾರಣಾ ಕ್ರಮಗಳಿಗೆ ಪಕ್ಷ ಅನುಮೋದನೆ ನೀಡಿತು. ಕುಟುಂಬದ ಎರಡನೆ ಸದಸ್ಯನು ಪಕ್ಷಕ್ಕಾಗಿ ಕನಿಷ್ಠ ಐದು ವರ್ಷಗಳ ಕಾಲ ದುಡಿದಿದ್ದಲ್ಲಿ ಆತನಿಗೆ/ಆಕೆಗೆ ಒಂದೇ ಕುಟುಂಬ ಒಂದೇ ಟಿಕೆಟ್ ನೀತಿಯು ಅನ್ವಯವಾಗುವುದಿಲ್ಲ. ಇದರಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾಧ್ರಾಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ.

ಇತರ ಅಭ್ಯರ್ಥಿಗಳಿಗೂ ಅವಕಾಶ ನೀಡುವ ಉದ್ದೇಶದಿಂದ ಯಾವುದೇ ವ್ಯಕ್ತಿಗೂ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಪಕ್ಷದ ಹುದ್ದೆಗಳನ್ನು ಆಲಂಕರಿಸಲು ಬಿಡುವುದಿಲ್ಲವೆಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತಿಳಿಸಿದೆ. ಎಲ್ಲಾ ಹಂತದಲ್ಲಿಯೂ 50 ವರ್ಷಗಳಿಗಿಂತ ಕೆಳವಯಸ್ಸಿನವರಿಗೆ ಶೇ.50ರಷ್ಟು ಮೀಸಲಾತಿಯನ್ನು ನೀಡುವುದಾಗಿಯೂ ಪಕ್ಷವು ಭರವಸೆ ನೀಡಿದೆ.

  ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ತರಲು ಸಾರ್ವಜನಿಕ ಒಳನೋಟ, ಚುನಾವಣಾ ನಿರ್ವಹಣೆ ಹಾಗೂ ರಾಷ್ಟ್ರೀಯ ತರಬೇತಿ ಈ ಮೂರು ವಿಭಾಗಗಳನ್ನು ಸ್ಥಾಪಿಸಲಾಗುವುದೆಂದು ಕಾರ್ಯಕಾರಿ ಸಮಿತಿ ತಿಳಿಸಿದೆ. ಸ್ವಪಕ್ಷೀಯರ ಅಹವಾಲುಗಳಿಗೆ ಸ್ಪಂದಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಿಂದ ರಾಜಕೀಯ ಸಲಹಾ ಸಮಿತಿಯನ್ನು ಸ್ಥಾಪಿಸುವ ಪ್ರಸ್ತಾವನೆಗೆ ಸೋನಿಯಾಗಾಂಧಿ ಅವರು ಅನುಮೋದನೆ ನೀಡಿದ್ದಾರೆ.

  ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯು ರವಿವಾರ ‘ಒಂದೇ ಕುಟುಂಬ, ಒಂದೇ ಟಿಕೆಟ್’ ನೀತಿಗೆ ಅನುಮೋದನೆ ನೀಡಿದೆ.
 ಮುಂದಿನ ಸುತ್ತಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳನ್ನು ಎದುರಿಸಲು ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ನಡೆಸುವ ಉದ್ದೇಶದಿಂದ ರೂಪಿಸಲಾದ ‘ನವಸಂಕಲ್ಪ’ ಮಾರ್ಗನಕ್ಷೆಯನ್ನು ಕಾಂಗ್ರೆಸ್ ಸಮಾವೇಶದಲ್ಲಿ ಅಂಗೀಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News