ರೈತ ಹೋರಾಟದ ಕೇಂದ್ರಬಿಂದುವಾಗಿದ್ದ ಟಿಕಾಯತ್‌ ಸಹೋದರರನ್ನು ಉಚ್ಛಾಟಿಸಿದ ಭಾರತೀಯ ಕಿಸಾನ್ ಯೂನಿಯನ್‌

Update: 2022-05-15 18:04 GMT
Rakesh Tikait (Photo | PTI)

ಹೊಸದಿಲ್ಲಿ: ಭಾರತೀಯ ಕಿಸಾನ್ ಯೂನಿಯನ್ (BKU) ಸಂಘಟನೆಯಿಂದ ಟಿಕಾಯತ್‌ ಸಹೋದರರನ್ನು ಹೊರಹಾಕಲಾಗಿದೆ ಎಂದು ತಿಳಿದು ಬಂದಿದೆ. ಲಕ್ನೋದಲ್ಲಿ ನಡೆದ ಸಭೆಯಲ್ಲಿ ರಾಕೇಶ್ ಟಿಕಾಯತ್ ಮತ್ತು ಅಧ್ಯಕ್ಷ ನರೇಶ್ ಟಿಕಾಯತ್ ಇಬ್ಬರನ್ನೂ ಸಂಘಟನೆಯಿಂದ ಹೊರಹಾಕಲಾಗಿದೆ. ಈ ಇಬ್ಬರು ನಾಯಕರು ಬಿಕೆಯು ಹೆಸರಿನಲ್ಲಿ ರಾಜಕೀಯ ಲಾಭ ಪಡೆದಿದ್ದಾರೆ ಎಂದು ಆರೋಪಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. 

ರಾಜೇಶ್ ಸಿಂಗ್ ಚೌಹಾಣ್ ಅವರು BKU ಅಧ್ಯಕ್ಷರಾಗಿದ್ದಾರೆ. ಈಗ ಈ ಸಂಘಟನೆಯು ಭಾರತೀಯ ಕಿಸಾನ್ ಯೂನಿಯನ್ (ಅಪಾಲಿಟಿಕಲ್) ಹೆಸರಿನಲ್ಲಿ ಮರು ರೂಪುಗೊಂಡಿದೆ ಎಂದು theprint.com ವರದಿ ಮಾಡಿದೆ. 
 
ರೈತರ ಹಿತಾಸಕ್ತಿಗಾಗಿ ರೂಪುಗೊಂಡಿದ್ದ ಬಿಕೆಯು ಸಂಘಟನೆಯನ್ನು ಟಿಕಾಯತ್‌ ಸಹೋದರರು ರಾಜಕೀಯಗೊಳಿಸಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ರೈತರ ಸಮಸ್ಯೆಗೆ ಮಾತ್ರ ವೇದಿಕೆಯಾಗಬೇಕಿದ್ದ ಸಂಘಟನೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೊಸ ಅಧ್ಯಕ್ಷ ರಾಜೇಶ್‌ ಸಿಂಗ್‌ ಚೌಹಾಣ್‌ ಆರೋಪಿಸಿದ್ದಾರೆ. 

ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರುದ್ಧ ನಡೆದ ಬೃಹತ್‌ ರೈತ ಹೋರಾಟದಲ್ಲಿ ಬಿಕೆಯು ಮಹತ್ವದ ಪಾತ್ರ ವಹಿಸಿತ್ತು. ರಾಕೇಶ್‌ ಟಿಕಾಯತ್‌ ರಾಷ್ಟ್ರ ಮಟ್ಟದ ರೈತನಾಯಕರಾಗಿ ಹೊರಹೊಮ್ಮಿದ್ದರು. ಕೃಷಿ ಕಾನೂನು ಹಿಂಪಡೆಯದ ಬಿಜೆಪಿಗೆ ಮತ ಹಾಕದಂತೆ ಉತ್ತರ ಪ್ರದೇಶ, ಬಿಹಾರ ಚುನಾವಣೆ ವೇಳೆ ರಾಕೇಶ್‌ ಟಿಕಾಯತ್‌ ಬಹಿರಂಗವಾಗಿ ಪ್ರಚಾರ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News