ಉಕ್ರೇನ್ ಯುದ್ಧದಲ್ಲಿ ಮೂರನೇ ಒಂದರಷ್ಟು ಸೇನೆ ಕಳೆದುಕೊಂಡ ರಷ್ಯಾ

Update: 2022-05-16 01:53 GMT

ಲಂಡನ್: ಉಕ್ರೇನ್ ವಿರುದ್ಧದ ಸಂಘರ್ಷದಲ್ಲಿ ರಷ್ಯಾ ಬಹುಶಃ ತನ್ನ ಭೂಸೇನೆಯಲ್ಲಿ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದೆ ಎಂದು ಬ್ರಿಟಿಷ್ ಗುಪ್ತಚರ ಸಂಸ್ಥೆ ಹೇಳಿದೆ.

ಉಕ್ರೇನ್‌ನಲ್ಲಿ ನಿಯೋಜಿಸಿದ ಸೇನೆಯ ಬಹುಪಾಲು ಕಳೆದುಕೊಂಡಿರುವ ಕಾರಣದಿಂದಾಗಿ ಡಾನ್‌ಬಸ್ ಪ್ರದೇಶದ ಮೇಲಿನ ದಾಳಿ ನಿಗದಿತ ಕಾಲಾವಧಿಗಿಂತ ತೀರಾ ಹಿಂದೆ ಬಿದ್ದಿದೆ ಎಂದೂ ಬ್ರಿಟಿಷ್ ಸೇನೆಯ ಗುಪ್ತಚರ ವಿಭಾಗ ಅಭಿಪ್ರಾಯಪಟ್ಟಿದೆ. ಮುಂದಿನ 30 ದಿನಗಳವರೆಗೆ ರಷ್ಯಾ ತನ್ನ ದಾಳಿ ವೇಗವನ್ನು ತೀವ್ರಗೊಳಿಸಿ, ಮುನ್ನಡೆ ಸಾಧಿಸುವುದು ಅಸಾಧ್ಯ ಎಂದು ಅಂದಾಜಿಸಿದೆ.

ಏತನ್ಮಧ್ಯೆ ರಷ್ಯಾ ವಿರುದ್ಧದ ಯುದ್ಧವನ್ನು ಉಕ್ರೇನ್ ಗೆಲ್ಲಬಲ್ಲದು ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲೆಟ್‌ಬರ್ಗ್ ಹೇಳಿಕೆ ನೀಡಿದ್ದಾರೆ. ನ್ಯಾಟೊ ಮೈತ್ರಿಕೂಟ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ದಶಕದ ವಿರೋಧವನ್ನು ಲೆಕ್ಕಿಸದೇ ನ್ಯಾಟೊ ಕೂಟವನ್ನು ಸೇರುವ ನಿರ್ಧಾರವನ್ನು ಸ್ವೀಡನ್ ಕೈಗೊಂಡಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ, ನ್ಯಾಟೊ ಸದಸ್ಯತ್ವ ಪಡೆಯುವ ಮಹತ್ವದ ನಿರ್ಧಾರವನ್ನು ಸ್ವೀಡನ್ ಪಾರ್ಲಿಮೆಂಟ್‌ನಲ್ಲಿ ಭಾರಿ ಬಹುಮತದೊಂದಿಗೆ ಆಂಗೀಕರಿಸಲಾಗಿದೆ.

ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿರುವ ಫಿನ್ಲೆಂಡ್ ಮತ್ತು ಸ್ವೀಡನ್‌ಗೆ ಅರ್ಜಿ ಆಂಗೀಕಾರವಾಗುವರೆಗಿನ ಮಧ್ಯಂತರ ಅವಧಿಯಲ್ಲಿ ಭದ್ರತಾ ಖಾತರಿ ನೀಡುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಕೂಟದ ಮುಖ್ಯಸ್ಥ ಜೇನ್ಸ್ ಸ್ಟೊಲೆಟ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News