ರಾಷ್ಟ್ರ ರಾಜಧಾನಿಯಲ್ಲಿ ದಾಖಲೆ ತಾಪಮಾನ; ಉತ್ತರ ಭಾರತ ಕೆಂಡ

Update: 2022-05-16 03:05 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ದಾಖಲೆ ಗರಿಷ್ಠ ತಾಪಮಾನ ದಾಖಲಾಗಿದ್ದು, ಪಾದರಸ ಮಟ್ಟ 49 ಡಿಗ್ರಿಯನ್ನು ದಾಟಿದೆ. ಹರ್ಯಾಣ ಗಡಿಗೆ ಹೊಂದಿಕೊಂಡಿರುವ ಮುಂಗೇಶ್‌ಪುರ ಪ್ರದೇಶದಲ್ಲಿ ತಾಪಮಾನ 49 ಡಿಗ್ರಿ ದಾಖಲಾಗಿದ್ದರೆ, ಗುರುಗಾಂವ್‌ನಲ್ಲಿ 48 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಕೂಡಾ 1966ರ ಬಳಿಕ ದಾಖಲಾದ ಗರಿಷ್ಠ ತಾಪಮಾನವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಳೆ ಕೊರತೆ, ವ್ಯಾಪಕ ಬಿಸಿ ಗಾಳಿಗೆ ಕಾರಣ ಎಂದು ಹೇಳಲಾಗಿದೆ. ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೂಡಾ ಉಷ್ಣಾಂಶ ಏರುತ್ತಲೇ ಇದೆ.

"ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾಶ್ಚಿಮಾತ್ಯ ಪ್ರಕ್ಷುಬ್ಧತೆ ಕಂಡುಬಂದಿದೆ. ಆದರೆ ಈ ಮಾರುತ ಸಾಕಷ್ಟು ಮಳೆ ತರುವಲ್ಲಿ ವಿಫಲವಾಗಿದೆ. ಈ ಪೈಕಿ ಬಹುತೇಕ ಮಾರುತಗಳು ದಟ್ಟ ಮೋಡ ಅಥವಾ ಪ್ರಬಲ ಗಾಳಿಗೆ ಮಾತ್ರ ಕಾರಣವಾಗಿವೆ. ಇದು ತಾಪಮಾನ ಕನಿಷ್ಠ ಎರಡು ಡಿಗ್ರಿ ಹೆಚ್ಚಲು ಕಾರಣವಾಗಿದೆಯೇ ವಿನಃ ಬಿಸಿಲ ಬೇಗೆಗೆ ಪರಿಹಾರ ನೀಡಿಲ್ಲ" ಎಂದು ಭಾರತದ ಹವಾಮಾನ ಇಲಾಖೆಯ ಮುಖ್ಯ ವಿಜ್ಞಾನಿ ಆರ್.ಕೆ.ಜೇನಮನಿ ಹೇಳುತ್ತಾರೆ.

ಭಾನುವಾರ ರಾಷ್ಟ್ರ ರಾಜಧಾನಿ ಇಡೀ ವರ್ಷದಲ್ಲೇ ಗರಿಷ್ಠ ತಾಪಮಾನ ದಾಖಲಿಸಿದೆ. ಕಳೆದ ಕೆಲ ವಾರದಲ್ಲಿ ಕೇವಲ ಎರಡು ದಿನ ಮಾತ್ರ ಅಲ್ಪಸ್ವಲ್ಪ ಮಳೆಯಾಗಿದ್ದು, ಏಪ್ರಿಲ್ 21ರಂದು 0.3 ಮಿಲಿಮೀಟರ್ ಹಾಗೂ ಮೇ 4ರಂದು 1.4 ಮಿಲಿಮೀಟರ್ ಮಳೆ ಬಿದ್ದಿದೆ. ಕಳೆದ ತಿಂಗಳು ಏಳು ದಶಕದಲ್ಲೇ ಎರಡನೇ ಗರಿಷ್ಠ ತಾಪಮಾನ ದಾಖಲಿಸಿದ ತಿಂಗಳಾಗಿತ್ತು.

ನಗರದ ಬಹುತೇಕ ಮಾಪನ ಕೇಂದ್ರಗಳಲ್ಲಿ 45 ಡಿಗ್ರಿಗಿಂತ ಅಧಿಕ ತಾಪಮಾನ ದಾಖಲಾಗಿದೆ. ನೈರುತ್ಯ ದೆಹಲಿಯ ಮುಂಗೇಶ್‌ಪುರದಲ್ಲಿ 49 ಡಿಗ್ರಿ ಸೆಲ್ಷಿಯಸ್‌ಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ದೆಹಲಿ ಮಾತ್ರವಲ್ಲದೇ ದೇಶದ ಇತರ ಭಾಗಗಳು ಕೂಡಾ ಬಿಸಿಲ ಬೇಗೆಗೆ ಕಂಗೆಟ್ಟಿವೆ. "ರಾಜಸ್ಥಾನದಲ್ಲಿ ಬಿಸಿ ಗಾಳಿಯ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ನರೇಶ್ ಕುಮಾರ್ ಹೇಳಿದ್ದಾಗಿ ಎಎನ್‌ಐ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News