ಮಣಿಪಾಲ; ಟೂರಿಸ್ಟ್ ಕಾರು ಚಾಲಕನ ಸುಲಿಗೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Update: 2022-05-16 17:48 GMT

ಉಡುಪಿ : ಮಣಿಪಾಲದಿಂದ ಬಾಡಿಗೆ ಹೆಸರಿನಲ್ಲಿ ಕಾರವಾರಕ್ಕೆ ಕರೆದೊಯ್ದ ಚಾಲಕನನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು  ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಉಳ್ಳಾಲ ನಿವಾಸಿ ಚರಣ್‌ (35), ಶಿರ್ವ ನಿವಾಸ ಮೊಹಮ್ಮದ್‌ ಅಝರುದ್ದೀನ್‌ (39), ಬಂಟ್ವಾಳ ನಿವಾಸಿ ಶರತ್‌ ಪೂಜಾರಿ (36) ಮತ್ತು ಮಂಗಳೂರು ನಿವಾಸಿ ಜಯಪ್ರಸಾದ್‌ (43) ಬಂಧಿತ ಆರೋಪಿಗಳು.

80 ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ (61) ಎಂಬವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.27ರಂದು ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು. ರಾತ್ರಿ 8.40 ಗಂಟೆಗೆ ಅಂಕೋಲ ರೈಲ್ವೆ ನಿಲ್ದಾಣದ ಸಮೀಪ ಕಾರನ್ನು ಆರೋಪಿಗಳು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಹಿಡಿದು, ಉಳಿದ ಮೂವರು ಅವರನ್ನು ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಎಳೆದು ಕುಳ್ಳಿರಿಸಿದರು.

ನಂತರ ಚೂರಿ ತೋರಿಸಿ, ಶ್ರೀಧರ ಭಕ್ತ ಪರ್ಸ್‌ನಲ್ಲಿದ್ದ 3000 ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ತೆಗೆದುಕೊಂಡರು. ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಕಾರನ್ನು ಚಲಾಯಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಕುಂದಾಪುರದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತನಿಗೆ ಹೇಳಿದರು. ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋದ ಶ್ರೀಧರ್ ಭಕ್ತ, ಬಳಿಕ ಹೊರಗೆ ಬಂದಿದ್ದು, ಈ ವೇಳೆ ಅವರು ಸ್ಥಳದಿಂದ ಓಡಿ ಹೋಗಿ ಪರಾರಿಯಾದ ಕುರಿತು ಶ್ರೀಧರ ಭಕ್ತ ಅವರು ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು.

ಶ್ರೀಧರ ಭಕ್ತ ದೂರಿನಂತೆ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಡುಪಿ ಪೊಲೀಸ್ ಅಧೀಕ್ಷಕರಾದ  ವಿಷ್ಣುವರ್ಧನ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಎಸ್ ಪಿ  ಸಿದ್ದಲಿಂಗಪ್ಪ ನವರ ಮಾರ್ಗದರ್ಶನ ದಲ್ಲಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಸುಧಾಕರ ನಾಯಕ್‌ ನೇತೃತ್ವದಲ್ಲಿ ಮಣಿಪಾಲ ಪೊಲೀಸ್‌ ನಿರೀಕ್ಷಕರಾದ ಮಂಜುನಾಥ್‌, ಉಪನಿರೀಕ್ಷಕರಾದ ರಾಜಶೇಖರ್‌ ವಂದಲಿ, ಸಿಬ್ಬಂದಿ ಶೈಲೇಶ್‌, ನಾಗೇಶ್‌ ನಾಯ್ಕ್‌, ಪ್ರಸನ್ನ, ಇಮ್ರಾನ್‌, ಪ್ರಸಾದ್‌ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News