‌ಪತ್ರಕರ್ತೆ ಶಿರೀನ್ ಅಂತ್ಯಕ್ರಿಯೆ ಸಂದರ್ಭ ಇಸ್ರೇಲ್ ಪೊಲೀಸರ ದಾಳಿಗೆ ಕ್ಯಾಥೊಲಿಕ್ ಪಾದ್ರಿ ಖಂಡನೆ

Update: 2022-05-16 18:06 GMT
photo:AFP

ಜೆರುಸಲೇಂ, ಮೇ 16: ಕಳೆದ ಬುಧವಾರ ಇಸ್ರೇಲ್ ಸೇನೆಯಿಂದ ಹತ್ಯೆಗೀಡಾದ ಪತ್ರಕರ್ತೆ ಶಿರೀನ್ ಅಂತ್ಯಕ್ರಿಯೆ ಮೆರವಣಿಗೆ ಸಂದರ್ಭ ಪೊಲೀಸರು ಲಾಠಿಚಾರ್ಜ್ ನಡೆಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕ್ಯಾಥೊಲಿಕ್ ಚರ್ಚ್‌ಗೆ  ಅಗೌರವ ತೋರಿದ್ದಾರೆ ಎಂದು ಜೆರುಸಲೇಂನ ಉನ್ನತ ಕ್ಯಾಥೊಲಿಕ್ ಧರ್ಮಗುರು ಪಿಯರ್‌ಬ್ಯಟಿಸ್ಟಾ ಪಿಝಬಲಾ  ಖಂಡಿಸಿದ್ದಾರೆ.

 ಆಸ್ಟತ್ರೆಯಿಂದ ಶಿರೀನ್ ಮೃತದೇಹವನ್ನು ಜೆರುಸಲೇಂ ಓಲ್ಡ್‌ಸಿಟಿಯ ಕ್ಯಾಥೊಲಿಕ್ ಚರ್ಚ್‌ಗೆ  ಮೆರವಣಿಗೆ ಮೂಲಕ ಕೊಂಡೊಯ್ದ ಸಂದರ್ಭ ಪೆಲೆಸ್ತೀನ್ ಧ್ವಜ ಹಿಡಿದುಕೊಂಡ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಅನಗತ್ಯ ಮತ್ತು ಅಸಮಾನ ಬಲ ಪ್ರಯೋಗಿಸಿ ಅವರನ್ನು ಚದುರಿಸಲು ಇಸ್ರೇಲ್ ಪೊಲೀಸರು ನಡೆಸಿದ ಕಾರ್ಯಾಚರಣೆ ವಿಶ್ವದಾದ್ಯಂತ ಪ್ರಸಾರವಾಗಿದೆ. ಪೊಲೀಸರ ಕ್ರಮವು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಮಾನವ ಹಕ್ಕು ಸೇರಿದಂತೆ ಅಂತರಾಷ್ಟ್ರೀಯ ನಿಯಮ ಮತ್ತು ನಿಬಂಧನೆಗಳ ತೀವ್ರ ಉಲ್ಲಂಘನೆಯಾಗಿದೆ ಎಂದು ಜೆರುಸಲೇಂನ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಧರ್ಮಗುರು ಖಂಡಿಸಿದ್ದಾರೆ.ಶಿರೀನ್ ಮೃತದೇಹ ಇರಿಸಿದ್ದ ಕಟ್ಟಡಕ್ಕೆ ಇಸ್ರೇಲ್ ಪಡೆ ನುಗ್ಗಿ ಅಲ್ಲಿದ್ದವರ ಮೇಲೆ ಲಾಠಿ ಬೀಸುತ್ತಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸೈಂಟ್ ಜೋಸೆಫ್ ಆಸ್ಪತ್ರೆ ಬಿಡುಗಡೆಗೊಳಿಸಿದ್ದು, ಈ ಕಾರ್ಯಾಚರಣೆಯಲ್ಲಿ 13 ಮಂದಿ ಗಾಯಗೊಂಡಿರುವುದಾಗಿ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News