ಅಮೆರಿಕ ಆಕ್ರಮಣ ನಡೆಸದೆ ಪಾಕಿಸ್ತಾನವನ್ನು ಗುಲಾಮನನ್ನಾಗಿಸಿದೆ: ಇಮ್ರಾನ್‌ ಖಾನ್‌

Update: 2022-05-16 18:28 GMT

ಇಸ್ಲಾಮಾಬಾದ್, ಮೇ 16: ಅಮೆರಿಕವು ಆಕ್ರಮಣ ನಡೆಸದೆ ಪಾಕಿಸ್ತಾನವನ್ನು ಗುಲಾಮನನ್ನಾಗಿಸಿದ್ದು, ದೇಶದ ಜನತೆ ಆಮದು ಮಾಡಿಕೊಂಡ ಸರಕಾರವನ್ನು ಎಂದಿಗೂ ಒಪ್ಪಲಾರರು ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ಖಾನ್ ಹೇಳಿದ್ದಾರೆ.

 ಪಾಕಿಸ್ತಾನದ ಪಂಜಾಬ್ ಪ್ರಾಂತದ ಫೈಸಲಾಬಾದ್ನಲ್ಲಿ ರವಿವಾರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕವು ತನಗೆ ಲಾಭವಿದ್ದರೆ, ತನ್ನ ಸ್ವಂತ ಹಿತಾಸಕ್ತಿಗೆ ಪೂರಕವಾಗಿದ್ದರೆ ಮಾತ್ರ ಇತರರಿಗೆ ನೆರವಾಗುವ ಸ್ವಕೇಂದ್ರಿತ ದೇಶವಾಗಿದೆ ಎಂದು ಆರೋಪಿಸಿದರು.

 ಪಾಕ್ನ ನೂತನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರು, ಇಮ್ರಾನ್ಖಾನ್ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ರಿಂದ ಹಣವನ್ನು ಬೇಡಿ ಪಡೆಯಲಿದ್ದಾರೆ ಎಂದು ಟೀಕಿಸಿದ ಇಮ್ರಾನ್ಖಾನ್,
 ಬಿಲಾವಲ್ ಮತ್ತು ಅವರ ತಂದೆ ಅಸಿಫ್ ಆಲಿ ಝರ್ದಾರಿ ಭ್ರಷ್ಟಾಚಾರದ ಮೂಲಕ ಸಂಪಾದಿಸಿದ ಅಪಾರ ಅಕ್ರಮ ಸಂಪತ್ತನ್ನು ವಿದೇಶದಲ್ಲಿ ಜಮೆಗೊಳಿಸಿದ್ದಾರೆ. ಆದ್ದರಿಂದ ಅಮೆರಿಕದ ವಿರೋಧ ಕಟ್ಟಿಕೊಂಡರೆ ಎಲ್ಲವನ್ನೂ ಕಳೆದುಕೊಳ್ಳುವ ಭೀತಿ ಅವರಿಗಿದೆ ಎಂದರು. ತನ್ನನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸುವ ಪಿತೂರಿ ಪಾಕಿಸ್ತಾನದಲ್ಲಿ ಮತ್ತೆ ವಿದೇಶದಲ್ಲಿ ರೂಪಿಸಲಾಗಿತ್ತು ಎಂದು ಆರೋಪಿಸಿದ ಅವರು, ಒಂದು ವೇಳೆ ತನಗೇನಾದರೂ ಆದರೆ ಆಗ ತಾನು ರಹಸ್ಯ ಸ್ಥಳದಲ್ಲಿ ಇರಿಸಿರುವ ವೀಡಿಯೊ ಸಂದೇಶದಲ್ಲಿ ಸಂಚುಕೋರರ ಬಗ್ಗೆ ಜನತೆಗೆ ತಿಳಿಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News