ಬೀಜಿಂಗ್: ಕೋವಿಡ್ ನಿರ್ಬಂಧ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2022-05-16 18:34 GMT

ಬೀಜಿಂಗ್, ಮೇ 16: ಬೀಜಿಂಗ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಠಿಣ ಕೋವಿಡ್ ನಿರ್ಬಂಧ ಜಾರಿಯಲ್ಲಿರುವುದನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಕಟ್ಟುನಿಟ್ಟಾದ ಶೂನ್ಯ ಕೋವಿಡ್ ನೀತಿಗೆ ಬದ್ಧವಾಗಿರುವ ಏಕೈಕ ಪ್ರಮುಖ ದೇಶವಾಗಿರುವ ಚೀನಾದಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್ಡೌನ್ ನಿಯಮ, ಕ್ವಾರಂಟೈನ್ ವ್ಯವಸ್ಥೆ ಮತ್ತು ಇದನ್ನು ಉಲ್ಲಂಘಿಸಿದರೆ ವಿಧಿಸುವ ಕಠಿಣ ಕ್ರಮಗಳು ಜನರ ವ್ಯಾಪಕ ಹತಾಶೆಗೆ ಕಾರಣವಾಗಿದೆ.
ಇತ್ತೀಚಿನ ವಾರಗಳಲ್ಲಿ 1000ಕ್ಕೂ ಅಧಿಕ ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿರುವ ಬೀಜಿಂಗ್ನಲ್ಲಿ ಬಹುತೇಕ ರೆಸ್ಟಾರೆಂಟ್ಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. ಪ್ರತೀ ದಿನ ಕೋಟ್ಯಾಂತರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಮತ್ತು ವರ್ಕ್ಫ್ರಂ ಹೋಮ್ (ಮನೆಯಿಂದಲೇ ಕೆಲಸ ನಿರ್ವಹಣೆ) ವ್ಯವಸ್ಥೆ ಜಾರಿಯಲ್ಲಿದೆ. ಪೆಕಿಂಗ್ ವಿವಿಯಲ್ಲಿ ಚಲನವಲನಕ್ಕೆ ಕಠಿಣ ನಿರ್ಬಂಧ ಮತ್ತು ವಿವಿಯ ಕ್ಯಾಂಪಸ್ಗೆ ಆಹಾರ ಪೂರೈಕೆಯನ್ನು ಅಧಿಕಾರಿಗಳು ನಿಷೇಧಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲೇ ಲಾಕ್ಡೌನ್ಗೆ ಒಳಪಟ್ಟಿರುವ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ನ ನಿರ್ದಿಷ್ಟ ಭಾಗದಲ್ಲಿ ಮಾತ್ರ ಅಡ್ಡಾಡಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಸಂದರ್ಶಕರ ಭೇಟಿಯನ್ನು ನಿಷೇಧಿಸಲಾಗಿದ್ದು ವಿದ್ಯಾರ್ಥಿಗಳು ದಿನಾ ಸೋಂಕು ಪರೀಕ್ಷೆಗೆ ಒಳಗಾಗಬೇಕಿದೆ.
 ಇದನ್ನು ವಿರೋಧಿಸಿ ಸುಮಾರು 300 ವಿದ್ಯಾರ್ಥಿಗಳು ವಿವಿಯ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿವಿಯ ಶಿಕ್ಷಕರಿಗೆ ಹೆಚ್ಚಿನ ನಿರ್ಬಂಧ ವಿಧಿಸದೆ ವಿದ್ಯಾರ್ಥಿಗಳನ್ನು ಮಾತ್ರ ಕಠಿಣ ಕ್ರಮಕ್ಕೆ ಗುರಿಯಾಗಿಸಲಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 ಪ್ರತಿಭಟನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿವಿಯ ಉಪಪ್ರಾಂಶುಪಾಲ ಚೆನ್ ಬವೊಜಿಯಾನ್, ಕ್ರಮಬದ್ಧವಾಗಿ ತಮ್ಮತಮ್ಮ ವಸತಿ ನಿಲಯಕ್ಕೆ ಮರಳುವಂತೆ ಸೂಚಿಸಿದರು ಎಂದು ವರದಿಯಾಗಿದೆ. ಆ ಬಳಿಕ ನಡೆದ ಸಭೆಯಲ್ಲಿ, ವಿದ್ಯಾರ್ಥಿಗಳು ಕ್ಯಾಂಪಸ್ನಿಂದ ಹೊರಗೆ ತೆರಳಿ ವಿವಿಯ ಇತರ ಪ್ರದೇಶಕ್ಕೆ ಸಂಚರಿಸಲು ಅವಕಾಶ ಮಾಡಿಕೊಡಲು ಮತ್ತು ದಿನಸಿ ವಿತರಣೆ ಒದಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದು ಪ್ರತಿಭಟನೆಯಲ್ಲ, ವಿದ್ಯಾರ್ಥಿಗಳು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೆ ಎಂದು ವಿವಿ ಅಧಿಕಾರಿಗಳು ಹೇಳಿದ್ದಾರೆ
  ಸೋಮವಾರ ವಿವಿಯ ಎದುರುಗಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೆಕಿಂಗ್ ವಿವಿಯಲ್ಲಿ ನಡೆಯುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಅತ್ಯಂತ ಮಹತ್ವವಿದೆ. 1919ರಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರತಿಭಟನೆ ನಡೆದಿದ್ದರೆ 1989ರಲ್ಲಿ ಚೀನಾದ ತಿಯಾನ್ಮೆನ್ ಚೌಕಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪೆಕಿಂಗ್ ವಿವಿಯಲ್ಲಿ ನಡೆದ ಪ್ರತಿಭಟನೆ ಮೂಲವಾಗಿತ್ತು. ಪೆಕಿಂಗ್ ವಿವಿ ರಾಜಕೀಯ ಮಹತ್ವದ ಸಂಸ್ಥೆಯಾಗಿದ್ದು ಇಲ್ಲಿ ಆರಂಭವಾಗುವ ಪ್ರತಿಭಟನೆಯನ್ನು ಕ್ಷಿಪ್ರವಾಗಿ ಮತ್ತು ತ್ವರಿತವಾಗಿ ಹತ್ತಿಕ್ಕಲು ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಲಂಡನ್ನ ಸೊವಾಸ್ ಚೀನಾ ಇನ್ಸ್ಟಿಟ್ಯೂಟ್ನ ನಿರ್ದೇಶಕ ಸ್ಟೀವ್ ತ್ಸಾಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News