ಪೆಲೆಸ್ತೀನ್ ವ್ಯಕ್ತಿಯ ಅಂತ್ಯಕ್ರಿಯೆ ಮೆರವಣಿಗೆ ಮೇಲೆ ಇಸ್ರೇಲ್ ಪೊಲೀಸರ ದಾಳಿ: 70 ಮಂದಿಗೆ ಗಾಯ

Update: 2022-05-17 18:17 GMT

ಜೆರುಸಲೇಂ, ಮೇ 17: ಕಳೆದ ತಿಂಗಳು ಅಲ್ಅಖ್ಸಾ ಮಸೀದಿ ಆವರಣದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಪೆಲೆಸ್ತೀನ್ ಯುವಕ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದು ಸೋಮವಾರ ನಡೆದ ಆತನ ಅಂತ್ಯಕ್ರಿಯೆ ಮೆರವಣಿಗೆಯ ಮೇಲೆ ಇಸ್ರೇಲ್ ಪೊಲೀಸರು ನಡೆಸಿದ ದಾಳಿಯಲ್ಲಿ 70ಕ್ಕೂ ಅಧಿಕ ಪೆಲೆಸ್ತೀನೀಯರು ಗಾಯಗೊಂಡಿರುವುದಾಗಿ ವರದಿಯಾಗಿದೆ.
   

ಎಪ್ರಿಲ್ 22ರಂದು ಜೆರುಸಲೇಂನ ಅಲ್ಅಖ್ಸಾ ಮಸೀದಿಯ ಆವರಣಕ್ಕೆ ನುಗ್ಗಿದ್ದ ಇಸ್ರೇಲ್ ಪೊಲೀಸರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಪೆಲೆಸ್ತೀನ್ ಯುವಕ ವಾಲಿದ್ ಅಲ್ ಶರೀಫ್ ತಲೆಗೆ ರಬ್ಬರ್ ಲೇಪಿತ ಬುಲೆಟ್ ಬಡಿದು ತೀವ್ರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಆದರೆ ಓಡುವ ಭರದಲ್ಲಿ ಕೆಳಗೆ ಬಿದ್ದು ಶರೀಫ್ ಗಾಯಗೊಂಡಿದ್ದ ಎಂದು ಇಸ್ರೇಲ್ ಪೊಲೀಸರು ಹೇಳಿದ್ದರು. ಕಾರ್ಯಾಚರಣೆಯ ವೀಡಿಯೊ ವೈರಲ್ ಆಗಿದ್ದು, ಪೊಲೀಸರು ಗುಂಡು ಹಾರಿಸಿದಾಗ ಮಸೀದಿಯ ಆವರಣದಲ್ಲಿದ್ದವರು ದಿಕ್ಕಾಪಾಲಾಗಿ ಓಡುತ್ತಿರುವುದು, ಗುಂಡು ಹಾರಾಟದ ಸದ್ದಿನ ಬಳಿಕ ಶರೀಫ್ ಮುಖ ಕೆಳಗಾಗಿ ನೆಲಕ್ಕೆ ಉರುಳಿ ಬೀಳುವುದು ಸ್ಪಷ್ಟವಾಗಿದೆ. ಗಾಯಗೊಂಡ ಶರೀಫ್ ಕೋಮಾಕ್ಕೆ ಹೋಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶರೀಫ್ ಶನಿವಾರ ಮೃತಪಟ್ಟಿದ್ದು ಸೋಮವಾರ ನಡೆದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ನೂರಾರು ಪೆಲೆಸ್ತೀನೀಯರು ಪಾಲ್ಗೊಂಡಿದ್ದರು.

 ಮೆರವಣಿಗೆಯನ್ನು ಚದುರಿಸಲು ಇಸ್ರೇಲ್ ಪೊಲೀಸರು ಅಶ್ರುವಾಯು ಸಿಡಿಸಿ ರಬ್ಬರ್ ಲೇಪಿತ ಬುಲೆಟ್ ಪ್ರಯೋಗಿಸಿದಾಗ ಸುಮಾರು 70 ಪೆಲೆಸ್ತೀನೀಯರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮೆರವಣಿಗೆಯಲ್ಲಿ ಪೆಲೆಸ್ತೀನ್ ಧ್ವಜ ಬಳಸುವುದನ್ನು ವಿರೋಧಿಸಿದ ಪೊಲೀಸರು ಸ್ಟನ್ ಗ್ರೆನೇಡ್, ಅಶ್ರುವಾಯು ಮತ್ತು ರಬ್ಬರ್ ಲೇಪಿತ ಬುಲೆಟ್ ಪ್ರಯೋಗಿಸಿದ್ದರಿಂದ ಕನಿಷ್ಟ 71 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಕಣ್ಣಿಗೆ ತೀವ್ರ ಹಾನಿಯಾಗಿದೆ ಎಂದು ಪೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ವರದಿ ಮಾಡಿದೆ.

ಮೆರವಣಿಗೆಯಲ್ಲಿ ಪಾಲ್ಗೊಂಡವರು ಕಾನೂನನ್ನು ಉಲ್ಲಂಘಿಸಿ ಭದ್ರತಾ ಪಡೆಯತ್ತ ಆಕ್ರಮಣಕಾರಿಯಾಗಿ ನುಗ್ಗಿಬಂದ ಕಾರಣ ಪೊಲೀಸರು ಬಲಪ್ರಯೋಗಿಸಿದ್ದಾರೆ. ಗುಂಪಿನ ದಾಳಿಯಲ್ಲಿ 6 ಅಧಿಕಾರಿಗಳು ಗಾಯಗೊಂಡಿದ್ದು 20 ಪೆಲೆಸ್ತೀನೀಯರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.ಇಸ್ರೇಲ್ ಪೊಲೀಸರ ಕ್ರೂರ ಮತ್ತು ಅನಾಗರಿಕ ಕೃತ್ಯ ಖಂಡನೀಯ. ಆಕ್ರಮಿತ ಪೂರ್ವ ಜೆರುಸಲೇಂ ಅನ್ನು ರಾಜಧಾನಿಯನ್ನಾಗಿ ಹೊಂದಿರುವ ಪೆಲೆಸ್ತೀನ್ ದೇಶ ನಿರ್ಮಾಣವಾದರೆ ಮಾತ್ರ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಯಾಗಬಹುದು ಎಂದು ಪೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ಕಚೇರಿ ಹೇಳಿಕೆ ಬಿಡುಗಡೆಗೊಳಿಸಿದೆ. ಜೋರ್ಡಾನ್ ಕೂಡಾ ಇಸ್ರೇಲ್ ಪೊಲೀಸರ ಕೃತ್ಯವನ್ನು ಕಟುವಾಗಿ ಖಂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News