ನೋಯ್ಡಾ: ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತ್ಯು

Update: 2022-05-18 04:55 GMT
Photo:PTI

ಹೊಸದಿಲ್ಲಿ: ನೋಯ್ಡಾದಲ್ಲಿ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಮ್ಯಾನ್‌ಹೋಲ್ ಅನ್ನು ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು  ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತರನ್ನು ಬುಲಂದ್‌ಶಹರ್ ನಿವಾಸಿ ಸೋನು ಸಿಂಗ್ (30 ವರ್ಷ) ಹಾಗೂ  ಉತ್ತರ ಪ್ರದೇಶದ ಇಟಾಹ್ ಮೂಲದ ಶ್ಯಾಮ್ ಬಾಬು (46 ವರ್ಷ) ಎಂದು ಗುರುತಿಸಲಾಗಿದೆ.

ಸಿ-17 ಹೊಸೈರಿ ಕಾಂಪ್ಲೆಕ್ಸ್‌ನಲ್ಲಿರುವ ಜವಳಿ ಕಂಪನಿಯ ಮುಂಭಾಗದ ಒಳಚರಂಡಿ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ನೊಯ್ಡಾದ 2ನೇ ಹಂತದ ಪೊಲೀಸ್ ಠಾಣೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿನ ಚರಂಡಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸ್ವಚ್ಛತಾ ಕಾರ್ಮಿಕರು ಒಳಚರಂಡಿಯೊಳಗೆ ಹೋಗಿದ್ದು, ಮ್ಯಾನ್‌ಹೋಲ್‌ನಿಂದ ಹೊರಸೂಸುವ ವಿಷಕಾರಿ ಹೊಗೆಯನ್ನು ಸೇವಿಸಿದ ನಂತರ ಪ್ರಜ್ಞಾಹೀನರಾದರು ”ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಸೆಂಟ್ರಲ್ ನೋಯ್ಡಾ) ಎಲಾಮಾರನ್ ಜಿ ಹೇಳಿದರು.

ಇಬ್ಬರು ಸ್ವಚ್ಛತಾ  ಕಾರ್ಮಿಕರನ್ನು ಅವರ ಸಹೋದ್ಯೋಗಿಗಳು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ಅವರಲ್ಲಿ ಒಬ್ಬರು ಸೋಮವಾರ ರಾತ್ರಿ ಚಿಕಿತ್ಸೆಯ ವೇಳೆ ಸಾವನ್ನಪ್ಪಿದರೆ, ಇನ್ನೊಬ್ಬ ಕಾರ್ಮಿಕ ಮಂಗಳವಾರ ನಸುಕಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ನಾವು ಇಬ್ಬರು ಮೃತ ಕಾರ್ಮಿಕರ ಕುಟುಂಬ ಸದಸ್ಯರಿಗೆ ಘಟನೆಯ ಕುರಿತು ತಿಳಿಸಿದ್ದೇವೆ. ಮುಂದಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮೃತರ ಮರಣೋತ್ತರ ಪರೀಕ್ಷೆಯನ್ನು ಮಂಗಳವಾರ ಸಂಜೆ ನಡೆಸಲಾಯಿತು ಮತ್ತು ವರದಿಗಳಿಗಾಗಿ ಕಾಯಲಾಗುತ್ತಿದೆ. ಇಬ್ಬರು ಕಾರ್ಮಿಕರನ್ನು ಸಿ -17 ಹೋಸೈರಿ ಸಂಕೀರ್ಣದಲ್ಲಿ ಜವಳಿ ಕಂಪನಿಯು ಕೆಲಸಕ್ಕೆ ನೇಮಿಸಿಕೊಂಡಿದೆ ”ಎಂದು ಎಡಿಸಿಪಿ ಎಲಾಮಾರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News