ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ: ನೋಂದಣಿಗೆ ಸೂಚನೆ

Update: 2022-05-18 16:22 GMT

ಉಡುಪಿ, ಮೇ 18: ತೋಟಗಾರಿಕಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಯಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

ರೈತರ ಪಹಣಿಯ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ, ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಯೋಜನೆಯಲ್ಲಿ ನೋಂದಣಿ ಮಾಡಿಸಲು ಜೂನ್ ೩೦ ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಮತ್ತು ಡಿಜಿಟಲ್ ಇ-ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.

ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮಪಂಚಾಯತ್‌ಗಳನ್ನು ವಿಮಾ ಘಟಕ ಗಳಾಗಿ ಅಧಿಸೂಚಿಸಲಾಗಿದ್ದು, ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದೆ.

ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ೧,೨೮,೦೦೦ ರೂ.ಗಳಿಗೆ ೬,೪೦೦ ರೂ. ವಿಮಾ ಕಂತನ್ನು ಹಾಗೂ ಕರಿಮೆಣಸು ಬೆಳೆಗೆ ವಿಮಾ ಮೊತ್ತ ೪೭,೦೦೦ ರೂ.ಗಳಿಗೆ ೨೩೫೦ ರೂ. ವಿಮಾ ಕಂತನ್ನು ನಿಗದಿಪಡಿಸಲಾಗಿದೆ.

ವಿಮಾ ನಷ್ಟ ಪರಿಹಾರವು ಆಧಾರ್ ಎನೇಬಲ್ಡ್ ಪೇಯ್‌ಮೆಂಟ್ ಸಿಸ್ಟಮ್ ಮುಖಾಂತರ ಆಗುವುದರಿಂದ ವಿಮಾ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ನೀಡಬೇಕು. ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪತ್ರಿಕೆ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆ, ಸ್ವಯಂಘೋಷಣೆ ನಮೂನೆಗಳನ್ನು ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಿ ಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತಸಂಪರ್ಕ ಕೇಂದ್ರ, ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News