ಸಾಲ ಮರುಪಾವತಿಸದವರ ಪಟ್ಟಿಗೆ ಶ್ರೀಲಂಕಾ ಸೇರ್ಪಡೆಯ ಸಾಧ್ಯತೆ: ಇದರಿಂದಾಗುವ ಅನಾನುಕೂಲವೇನು ಗೊತ್ತೇ?

Update: 2022-05-18 18:26 GMT

ಕೊಲಂಬೊ, ಮೇ 18: ಸರಕಾರಿ ಬಾಂಡ್ ಮೂಲಕ ಪಡೆದಿರುವ ಸಾಲವನ್ನು ಮರುಪಾವತಿಸಲು ನೀಡಿರುವ ಹೆಚ್ಚುವರಿ ಅವಧಿ ಬುಧವಾರ ಸಮಾಪ್ತಿಯಾಗಿರುವುದರಿಂದ ಅಂತರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ಶ್ರೀಲಂಕಾವನ್ನು ಡಿಫಾಲ್ಟರ್ ಪಟ್ಟಿ(ಸಾಲ ಮರುಪಾವತಿಸದವರ ಪಟ್ಟಿ)ಗೆ ಸೇರಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಡಿಫಾಲ್ಟರ್ ಪಟ್ಟಿಗೆ ಸೇರ್ಪಡೆಯಾದರೆ ಮುಂದಿನ ದಿನದಲ್ಲಿ ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯಲು ತೊಡಕಾಗುತ್ತದೆ.

 ‌
ಈ ಮಧ್ಯೆ, ಪೆಟ್ರೋಲ್ ಸರಕು ತುಂಬಿರುವ ಹಡಗು ಮಾರ್ಚ್ 28ರಿಂದ ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು ಅದರಲ್ಲಿರುವ ಪೆಟ್ರೋಲ್ ಬಿಡಿಸಿಕೊಳ್ಳಲು ಡಾಲರ್ ಮೂಲಕ ಹಣ ಪಾವತಿಸಬೇಕಿದೆ. ದೇಶದಲ್ಲಿ ವಿದೇಶಿ ವಿನಿಮಯ ದಾಸ್ತಾನು ಬರಿದಾಗಿರುವುದರಿಂದ ತೈಲದ ಕೊರತೆಯಾಗಲಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಕರ ಸಂಸತ್ತಿಗೆ ತಿಳಿಸಿದ್ದಾರೆ.
 

ಸರಕಾರಿ ಬಾಂಡ್ ಮೂಲಕ ಪಡೆದ 2 ಸಾಲದ ವಾಯ್ದೆ ಎಪ್ರಿಲ್ 18ಕ್ಕೆ ಅಂತ್ಯವಾಗಿತ್ತು. ಆದರೆ ಸಾಲ ಮರುಪಾವತಿಸಲು ಸಾಧ್ಯವಾಗದು ಎಂದು ಶ್ರೀಲಂಕಾ ಹೇಳಿದ್ದರಿಂದ 1 ತಿಂಗಳ ಹೆಚ್ಚುವರಿ ಅವಕಾಶ ನೀಡಿದ್ದು ಅದೂ ಬುಧವಾರಕ್ಕೆ ಅಂತ್ಯಗೊಂಡಿದೆ. ಸಾಲ ಮರುಪಾವತಿಸಲು ವಿಫಲರಾಗಿರುವುದು ಸರಕಾರದ ರೇಟಿಂಗ್ ಮೇಲೆ ಪರಿಣಾಮ ಬೀರಲಿದೆ ಎಂದು ಎಸ್ ಆ್ಯಂಡ್ ಪಿ ಸಂಸ್ಥೆ ಹೇಳಿದೆ.

ಪೆಟ್ರೋಲ್ ಸರಕನ್ನು ಬಿಡಿಸಿಕೊಳ್ಳಲು ವಿದೇಶಿ ವಿನಿಮಯದ ಕೊರತೆಯಿದೆ. ಈ ವಾರಾಂತ್ಯದೊಳಗೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆಯಿದೆ. ಅದುವರೆಗೆ ದೇಶದಲ್ಲಿ ಪೆಟ್ರೋಲ್‌ನ ಕೊರತೆ ಎದುರಾಗಲಿದ್ದು ಈಗ ಲಭ್ಯವಿರುವ ಅಲ್ಪಪ್ರಮಾಣದ ಪೆಟ್ರೋಲ್ ದಾಸ್ತಾನನ್ನು ಆಂಬ್ಯುಲೆನ್ಸ್‌ನಂತಹ ತುರ್ತು ಸೇವೆಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News