ಮುಂದಿನ 25 ವರ್ಷಕ್ಕೆ ಬಿಜೆಪಿ ಕಾರ್ಯಸೂಚಿ: ಪ್ರಧಾನಿ ಮೋದಿ

Update: 2022-05-21 02:43 GMT

ಹೊಸದಿಲ್ಲಿ: ಇತ್ತೀಚಿನ ಚುನಾವಣಾ ಯಶಸ್ಸಿನಿಂದ ತೃಪ್ತಿಪಟ್ಟುಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಉಪದೇಶ ನೀಡಿದರು. ಭಾರತದ ರಾಜಕೀಯದಲ್ಲಿ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಳ್ಳಲು  ಪಕ್ಷ ಮುಂದಿನ 25 ವರ್ಷಗಳ ಕಾರ್ಯಸೂಚಿಯನ್ನು ಹೊಂದಿದ್ದು, ಜನರ ಕಲ್ಯಾಣಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.

ಜೈಪುರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ವರ್ಚುವಲ್ ಭಾಷಣ ಮಾಡಿದ ಅವರು, "ಮುಂದಿನ 25 ವರ್ಷಗಳಿಗೆ ನಾವು ಯೋಜನೆ ಹಾಕಿಕೊಳ್ಳಬೇಕು. ಇದರಲ್ಲಿ ದೇಶದ ಜನರ ಹೆಚ್ಚುತ್ತಿರುವ ನಿರೀಕ್ಷೆ ಮತ್ತು ಆಕಾಂಕ್ಷೆಗಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು. ಪಕ್ಷ 18 ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದು, 400ಕ್ಕೂ ಅಧಿಕ ಸಂಸದರು ಮತ್ತು 1300 ಶಾಸಕರನ್ನು ಹೊಂದಿದೆ. ಆರಾಮವಾಗಿ ಇರಲು ಇದು ಸಾಕು ಎಂದು ಕೆಲವರು ಯೋಚಿಸಬಹುದು. ಆದರೆ ನಾವು ಹಾಗೆ ಮಾಡಬಾರದು... ನಾವು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೇ, ನಮ್ಮ ಸಂಸ್ಥಾಪಕರು ಬೋಧಿಸಿದಂತೆ ಜನ ಮತ್ತು ಕಲ್ಯಾಣಕ್ಕಾಗಿ ಕಠಿಣವಾಗಿ ಪರಿಶ್ರಮ ಹಾಕಬೇಕು" ಎಂದು ಸೂಚಿಸಿದರು.

2014ರ ಜನಾದೇಶ ದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಬಣ್ಣಿಸಿದ ಅವರು, ದಶಕಗಳ ನರಳಿಕೆ ಬಳಿಕ ಜನ ಬದಲಾವಣೆ ಬಯಸಿದರು ಎಂದು ಹೇಳಿದರು.

ಬಿಜೆಪಿ ಮುಂದಿನ 25 ವರ್ಷಗಳಲ್ಲಿ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಳ್ಳಲು, ಪ್ರತಿಯೊಬ್ಬ ಜನರಿಗೂ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ತಲುಪುವಂತೆ ಮಾಡುವ ಪ್ರತಿಜ್ಞೆಯನ್ನು ಕಾರ್ಯಕರ್ತರು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

"ಹರ್ ಘರ್ ಬಿಜೆಪಿ, ಹರ್ ಗರೀಬ್ ಕಾ ಕಲ್ಯಾಣ್" ಎಂಬ ಘೋಷಣೆಯನ್ನು ಮೋದಿ ನೀಡಿದರು. ಚುನಾವಣೆ ಸಂದರ್ಭದಲ್ಲಿ ಪ್ರತಿ ಮನೆಗೆ ಭೇಟಿ ನೀಡುವಂತೆ ಕಾರ್ಯಕರ್ತರು ಪ್ರತಿ ಮನೆಗಳನ್ನು ತಲುಪಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News