ದೇಶವನ್ನೇ ನಡುಗಿಸಿದ ಆ ತಡರಾತ್ರಿ ಸ್ಫೋಟದ ಮೆಲುಕು...

Update: 2022-05-21 03:36 GMT

ಹೊಸದಿಲ್ಲಿ: ಚುನಾವಣಾ ಪ್ರಚಾರ ಭಾಷಣಕ್ಕೆ ತಮಿಳುನಾಡಿನ ಶ್ರೀಪೆರಂಬದೂರಿಗೆ ತೆರಳಿದ್ದ ಅಂದಿನ ಪ್ರಧಾನಿ ರಾಜೀವ್‍ ಗಾಂಧಿ ಹತ್ಯೆಯಾಗಿ ಇಂದಿಗೆ 31 ವರ್ಷ ಸಂದಿದೆ. ತಡರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟ ಇಡೀ ದೇಶಕ್ಕೆ ಆಘಾತ ತಂದಿತ್ತು. ಅವರ ಕುಟುಂಬ ಮತ್ತು ಅನುಯಾಯಿಗಳು ಕಂಗೆಟ್ಟಿದ್ದರು. ರಾಷ್ಟ್ರ ರಾಜಕೀಯದ ಚಿತ್ರಣವೇ ಬದಲಾಯಿತು ಹಾಗೂ ಪ್ರಮುಖ ಪ್ರಾದೇಶಿಕ ರಾಜಕೀಯ ಚಿತ್ರಣ ಛಿದ್ರವಾಗಲು ಇದು ನಾಂದಿಯಾಯಿತು.

ಪ್ರಚಾರ ಅಭಿಯಾನದಲ್ಲಿ ರಾಜೀವ್‍ ಗಾಂಧಿ ಜತೆಗಿದ್ದ ಹಿಂದೂಸ್ತಾನ್ ಟೈಮ್ಸ್ ನ ಚಂದ್ ಜೋಶಿ, ಈ ಘಟನೆಯ ಹಿಂದೆ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‍ಟಿಟಿಇ) ಕೈವಾಡವನ್ನು ಶಂಕಿಸಿದ್ದರು. ಅದು ಬಳಿಕ ದೃಢಪಟ್ಟಿತು. ಅಂದಿನ ವರದಿಯಲ್ಲಿ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯ ಭಯಾನಕ ಕ್ರೌರ್ಯವನ್ನು ಅವರು ಸ್ಥಳದಿಂದ ಎಳೆ ಎಳೆಯಾಗಿ ಬಿಂಬಿಸಿದ್ದರು.‌

"ಮದ್ರಾಸ್‍ನಿಂದ ಶ್ರೀಪೆರಂಬದೂರಿಗೆ ಪಯಣ ಬೆಳೆಸುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ರಾಜೀವ್‍ ಗಾಂಧಿ ಕೇಂದ್ರದಲ್ಲಿ ಸ್ವಂತ ಬಲದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಆರಾಮ ಮತ್ತು ನಿರಾಳವಾಗಿ ಪತ್ರಕರ್ತರ ಜತೆ ಸಂಭಾಷಣೆ ನಡೆಸಿದ್ದರು.ರ‍್ಯಾಲಿಗೆ ಮುನ್ನ ರಾಜೀವ್‍ ಗಾಂಧಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು" ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.

ರಾಜೀವ್ ಸ್ಥಳಕ್ಕೆ ಆಗಮಿಸಿದಾಗ ಅವಧಿ ಮೀರಿತ್ತು. ಆದರೂ ಬೆಂಬಲಿಗರು ಹರ್ಷೋದ್ಗಾರಗಳಿಂದ ಸ್ವಾಗತಿಸಿದ್ದರು. ಆ ಬಳಿಕ ಗುಂಪಿನಿಂದ ಸ್ಫೋಟದ ಸದ್ದು ಕೇಳಿಸಿತು. ರಾಜೀವ್‍ ಗಾಂಧಿ ಮೃತಪಟ್ಟಿದ್ದರು. "ರಾಜೀವ್‍ ಗಾಂಧಿ ದೇಹವನ್ನು ಅವರ ಬಿಳಿಯ ಸ್ಪೋರ್ಟ್ಸ್ ಶೂ ಧರಿಸಿದ್ದ ಆಧಾರದಲ್ಲಿ ಪ್ರತ್ಯಕ್ಷದರ್ಶಿಯ ಹೇಳಿಕೆಯಂತೆ ಗುರುತಿಸಲಾಗಿತ್ತು. ರಾಜೀವ್ ತಲೆಯ ಹಿಂದೆ ಶೂ ಬಿದ್ದಿತ್ತು"

ಇಡೀ ವಾತಾವರಣ ದಟ್ಟ ಹೊಗೆ ಮತ್ತು ಸುಟ್ಟು ಕರಕಲಾದ ದೇಹಗಳಿಂದ ತುಂಬಿತ್ತು. ಹಲವು ಮಂದಿ ಮಹಿಳೆಯರ ಬಟ್ಟೆಗಳು ರಕ್ತಸಿಕ್ತವಾಗಿದ್ದವು.

ರಾತ್ರಿ 10.19ಕ್ಕೆ ನಡೆದ ಬಾಂಬ್ ಸ್ಫೋಟದಲ್ಲಿ ರಾಜೀವ್‍ ಗಾಂಧಿ ಹತ್ಯೆಯಾಗಿದ್ದಾರೆ ಎಂದು ಸರ್ಕಾರ ತಡರಾತ್ರಿ ಅಧಿಕೃತ ಘೋಷಣೆ ಮಾಡಿತು. ಪ್ರಧಾನ ಮಾಹಿತಿ ಅಧಿಕಾರಿ ರಾಮಮೋಹನ್ ರಾವ್ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದರು. ಹೂವಿನ ಗುಚ್ಛದಲ್ಲಿ ಹುದುಗಿಸಲಾಗಿದ್ದ ಬಾಂಬ್ ಸ್ಫೋಟದಿಂದ ರಾಜೀವ್‍ ಗಾಂಧಿ ಹತ್ಯೆಯಾದರು ಎಂದು ಪಕ್ಷದ ವಕ್ತಾರ ಪ್ರಣಬ್ ಮುಖರ್ಜಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News