ದೆಹಲಿಯಲ್ಲಿ ಭಾರಿ ಮಳೆ: ರಕ್ಷಣಾ ಸಚಿವರ ವಿಮಾನ ಸೇರಿ ವಾಯು ಸಂಚಾರ ವ್ಯತ್ಯಯ

Update: 2022-05-21 03:05 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆ ಬಿದ್ದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಸೇರಿದಂತೆ 11 ವಿಮಾನಗಳನ್ನು ಬೇರೆಡೆಗೆ ವಿಮುಖಗೊಳಿಸಲಾಯಿತು.

ವಿಮಾನ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ ಕೆಲ ವಿಮಾನಗಳನ್ನು ಲಕ್ನೋ ಮತ್ತು ಜೈಪುರಕ್ಕೆ ತಿರುಗಿಸಲಾಯಿತು. ವಿಮಾನ ಸಂಚಾರ ಬಗೆಗಿನ ಮಾಹಿತಿಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸು ವಂತೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ಮಾಡಿದ್ದಾರೆ.

"ಪ್ರತಿಕೂಲ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಧಕ್ಕೆ ಉಂಟಾಗಿದೆ. ವಿಮಾನಗಳ ಹಾರಾಟ ಬಗೆಗಿನ ತಾಜಾ ಮಾಹಿತಿಗಾಗಿ ಪ್ರಯಾಣಿಕರು ಆಯಾ ವಿಮಾನಯಾನ ಕಂಪನಿಗಳ ಜತೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ" ಎಂದು ದೆಹಲಿ ವಿಮಾನ ನಿಲ್ದಾಣದ ಟ್ವಿಟ್ಟರ್ ಹ್ಯಾಂಡಲ್‍ನಿಂದ ಟ್ವೀಟ್ ಮಾಡಲಾಗಿದೆ.

ಸಂಜೆಯ ವೇಳೆಗೆ ಆರಂಭವಾದ ಮಳೆ ರಾತ್ರಿಯಾಗುತ್ತಿದ್ದಂತೆ ರಭಸ ಪಡೆಯಿತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರಾಷ್ಟ್ರ ರಾಜಧಾನಿಗೆ ಮಳೆ ತಂಪೆರೆದಿದೆ. ಮಳೆಯ ಚಿತ್ರ ಹಾಗೂ ವೀಡಿಯೊ ತುಣುಕುಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News