ಜ್ಞಾನವಾಪಿ ಮಸೀದಿ ವಿರುದ್ಧದ ಅರ್ಜಿದಾರರ ನಡುವೆಯೇ ಒಡಕು?; ವರದಿ

Update: 2022-05-21 07:36 GMT

ಹೊಸದಿಲ್ಲಿ: ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿಗೆ ಭಾಗಶಃ ಬೀಗ ಜಡಿಯಲು ಕಾರಣವಾದ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಹಿಂದೂ ಅರ್ಜಿದಾರರಲ್ಲಿ ಒಡಕು ಮೂಡಿದೆ ಎಂದು scroll.in ವರದಿ ಮಾಡಿದೆ.

ಪ್ರಕರಣದಲ್ಲಿ ಐವರು ಮಹಿಳೆಯರು ಅರ್ಜಿದಾರರಾಗಿದ್ದರು. ಈ ಪೈಕಿ ಲಕ್ಷ್ಮೀದೇವಿ, ಸೀತಾಸಾಹು, ಮಂಜು ವ್ಯಾಸ್ ಮತ್ತು ರೇಖಾ ಪಾಟಕ್ ವಾರಣಾಸಿಯವರು. ಐದನೇ ಮಹಿಳೆ ರಾಖಿ ಸಿಂಗ್ ದೆಹಲಿಯವರು. ಇದುವರೆಗೆ ಅವರೆಲ್ಲರನ್ನೂ ವಕೀಲ ಶಿವಂ ಗೌರ್ ಪ್ರತಿನಿಧಿಸುತ್ತಿದ್ದರು. ಮೇ 20ರಂದು ವಾರಣಾಸಿಯ ದಾವೆದಾರರು ನೋಟಿಸ್ ಕಳುಹಿಸಿ, ಗೌರ್ ಕೇವಲ ರಾಖಿ ಸಿಂಗ್ ಅವರನ್ನಷ್ಟೇ ಪ್ರತಿನಿಧಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

"ಸಂವಹನದ ಕೊರತೆ ಹಿನ್ನೆಲೆಯಲ್ಲಿ ನಾಲ್ವರು ಮಹಿಳೆಯರ ವಕಾಲತ್ತನ್ನು ನಾನು ವಾಪಾಸು ಪಡೆದಿದ್ದೇನೆ" ಎಂದು ಗೌರ್ ಹೇಳಿದ್ದಾರೆ. ಈ ಮಹಿಳೆಯರು ನೇರವಾಗಿ ನನ್ನ ಜತೆ ಮಾತನಾಡಿರಲಿಲ್ಲ. ಆದ್ದರಿಂದ ಈಗ ನಾನು ಕೇವಲ ರಾಖಿ ಸಿಂಗ್ ಅವರನ್ನಷ್ಟೇ ಪ್ರತಿನಿಧಿಸುತ್ತಿದ್ದೇನೆ ಎಂದು ಗೌರ್ ಹೇಳಿದರು. ನಾಲ್ವರು ಇತರರನ್ನು ಸುಧೀರ್ ತ್ರಿಪಾಠಿ ಪ್ರತಿನಿಧಿಸುತ್ತಿದ್ದು, ಈ ಒಡಕಿನಿಂದ ಪ್ರಕರಣದ ಮೇಲೆ ಯಾವ ಪರಿಣಾಮವೂ ಆಗದು ಎಂದು ಅವರು ಹೇಳುತ್ತಾರೆ.

ಪ್ರಕರಣದ ಹಿಂದೆ ಇರುವ ಹಿಂದುತ್ವ ಸಂಘಟನೆಗಳ ತೀಕ್ಷ್ಣತೆ ಬಹುಶಃ ಈ ಒಡಕಿಗೆ ಕಾರಣ ಎಂದು scroll.in ವರದಿ ಮಾಡಿದೆ.

ಲಕ್ಷ್ಮೀದೇವಿಯವರ ಪತಿ ಸೋಹನ್ ಲಾಲ್ ಆರ್ಯಾ ಅವರು ವಾರಣಾಸಿಯಲ್ಲಿ ವಿಶ್ವಹಿಂದೂ ಪರಿಷತ್‍ನ ಹಿರಿಯ ಮುಖಂಡ. ಅವರು ಹೇಳುವಂತೆ ನಾಲ್ವರು ಮಹಿಳೆಯರನ್ನು ತಾವೇ ಆರಿಸಿ ಅರ್ಜಿ ಸಲ್ಲಿಸುವಂತೆ ಅವರೇ ಮಾಡಿದ್ದಾರೆ. ರಾಖಿ ಸಿಂಗ್ ವಿಶ್ವ ವೇದ ಸಂಘಟನೆ ಸಂಘದ ಹಿನ್ನೆಲೆಯವರು. ಸಂಘಟನೆಯ ಅಧ್ಯಕ್ಷ ಜಿತೇಂದ್ರ ಬೈಸೆನ್ ಅವರು ವಾರಣಾಸಿ ಅರ್ಜಿದಾರರನ್ನು ಸಂಪರ್ಕಿಸಿ ಸಿಂಗ್ ಹೆಸರನ್ನೂ ಪ್ರಕರಣದಲ್ಲಿ ಸೇರಿಸಿದ್ದರು. ಇದೀಗ ಆರ್ಯಾ ವೇದ ಸಂಘವನ್ನು ನಕಲಿ ಸಂಘಟನೆ ಎಂದು ಕರೆದಿದ್ದಾರೆ. ಇದು ಪ್ರಚಾರಪ್ರಿಯ ಸಂಘಟನೆ ಮತ್ತು ಪ್ರಕರಣದ ಹೆಗ್ಗಳಿಕೆ ಪಡೆಯಲು ಪ್ರಯತ್ನಿಸುತ್ತಿದೆ ಎನ್ನುವುದು ಅವರ ವಾದ.

ಪ್ರಕರಣ ಪ್ರಚಾರಕ್ಕೆ ಬರುತ್ತಿದ್ದಂತೆ ಜನರಲ್ಲಿ ಸಹಜವಾಗಿಯೇ ಭಿನ್ನಾಭಿಪ್ರಾಯ ಬರುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ತಮ್ಮ ಸಂಘಟನೆ ನಕಲಿ ಅಲ್ಲ. ಏನು ಮಾಡುತ್ತಿದೆ ಎಂದು ಎಲ್ಲರೂ ನೋಡಬಹುದು ಎಂದು ಬೈಸೆನ್ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News