ಮೆಹುಲ್ ಚೋಕ್ಸಿ ವಿರುದ್ಧದ ಅಕ್ರಮ ಪ್ರವೇಶ ಪ್ರಕರಣ ಹಿಂಪಡೆದ ಡೊಮಿನಿಕಾ

Update: 2022-05-21 07:01 GMT
Photo: PTI

ಹೊಸದಿಲ್ಲಿ: ಭಾರತದಿಂದ ಪರಾರಿಯಾಗಿರುವ  ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ  ವಿರುದ್ಧ ಕಾಮನ್‌ವೆಲ್ತ್ ಆಫ್ ಡೊಮಿನಿಕಾ ಪೊಲೀಸರು  ಅಕ್ರಮ ಪ್ರವೇಶದ ಆರೋಪ ಹೊರಿಸಿದ್ದರು. ಶನಿವಾರ ಚೋಕ್ಸಿ  ವಿರುದ್ಧದ ಕಾನೂನುಬಾಹಿರ ಪ್ರವೇಶ ಪ್ರಕರಣದಲ್ಲಿ ಕಾನೂನು ಕ್ರಮಗಳನ್ನು ಹಿಂತೆಗೆದುಕೊಳ್ಳಲು/ಮುಂದುವರಿಸದಿರಲು ಡೊಮಿನಿಕಾದ ಪ್ರಾಸಿಕ್ಯೂಷನ್ ನಿರ್ಧರಿಸಿದೆ.

"ಮೇ 2021 ರಲ್ಲಿ ಕಾನೂನುಬಾಹಿರ ಪ್ರವೇಶಕ್ಕಾಗಿ ಡೊಮಿನಿಕ ಸರಕಾರವು ಇಂದು ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಟ್ಟಿರುವುದಕ್ಕೆ ಚೋಕ್ಸಿ ಸಂತೋಷಪಟ್ಟಿದ್ದಾರೆ. ಹಾಗೆ ಮಾಡುವ ಮೂಲಕ ಚೋಕ್ಸಿ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂದು ಅವರು ಈಗ ಗುರುತಿಸಿದ್ದಾರೆ. ಚೋಕ್ಸಿ ಇಚ್ಛೆಗೆ ವಿರುದ್ಧವಾಗಿ ಚೋಕ್ಸಿಯನ್ನು ಆ್ಯಂಟಿಗುವಾದಿಂದ ಬಲವಂತವಾಗಿ ಹೊರಹಾಕಲಾಯಿತು. ದೋಣಿಯಲ್ಲಿ ಡೊಮಿನಿಕಾಗೆ ಕರೆದೊಯ್ಯಲಾಯಿತು.  ಅಲ್ಲಿ ಚೋಕ್ಸಿಗೆ ಎಂದಿಗೂ ಮಾಡದ ಅಪರಾಧಕ್ಕಾಗಿ ಮತ್ತೆ ಕಾನೂನುಬಾಹಿರವಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.ಚೋಕ್ಸಿಯ ಕಾನೂನು ತಂಡವು ಚೋಕ್ಸಿ ವಿರುದ್ಧ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸರಿಪಡಿಸಲು ನ್ಯಾಯಕ್ಕಾಗಿ ಎಲ್ಲಾ ಮಾರ್ಗಗಳನ್ನು ಅನುಸರಿಸುವುದನ್ನು ಮುಂದುವರೆಸಿದೆ’’ಎಂದು ಚೋಕ್ಸಿ ವಕ್ತಾರರು ತಿಳಿಸಿದ್ದಾರೆ.

13, 500 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ  ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿರುವ ಚೋಕ್ಸಿ ಕಳೆದ ವರ್ಷ ಮೇ 23 ರಂದು ಆ್ಯಂಟಿಗುವಾದಿಂದ ನಾಪತ್ತೆಯಾಗಿದ್ದ ಹಾಗೂ ಡೊಮಿನಿಕಾದಲ್ಲಿ ನಿಗೂಢವಾಗಿ ಕಾಣಿಸಿಕೊಂಡಿದ್ದ.

ವೈದ್ಯಕೀಯ ಕಾರಣಗಳಿಗಾಗಿ ಡೊಮಿನಿಕಾ ಹೈಕೋರ್ಟ್‌ನಿಂದ ಜಾಮೀನು ಪಡೆದ ನಂತರ ಆತ ಕಳೆದ ವರ್ಷ ಜುಲೈನಲ್ಲಿ  ಆ್ಯಂಟಿಗುವಾಗೆ ಮರಳಿದ್ದ.

ಮೇ 23 ರಂದು  ಆ್ಯಂಟಿಗುವಾದ ಜಾಲಿ ಹಾರ್ಬರ್‌ನಿಂದ ಆಂಟಿಗುವಾನ್ ಹಾಗೂ ಭಾರತೀಯರಂತೆ ಕಾಣುವ ಪೊಲೀಸರು ತನ್ನನ್ನು ಅಪಹರಿಸಿ ದೋಣಿಯಲ್ಲಿ ಡೊಮಿನಿಕಾಕ್ಕೆ ಕರೆತಂದರು ಎಂದು ಚೋಕ್ಸಿ ಆರೋಪಿಸಿದ್ದ. ಚೋಕ್ಸಿ  2018 ರಿಂದ ಆ್ಯಂಟಿಗುವಾದಲ್ಲಿ ಅಲ್ಲಿನ ನಾಗರಿಕನಾಗಿ  ನೆಲೆಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News