ʼಮುಸ್ಲಿಂ ಎಂದು ಭಾವಿಸಿʼ ಮಾನಸಿಕ ಅಸ್ವಸ್ಥ ವೃದ್ಧನನ್ನು ಥಳಿಸಿ ಕೊಲೆಗೈದ ಬಿಜೆಪಿ ಮುಖಂಡ: ವೀಡಿಯೊ ವೈರಲ್‌

Update: 2022-05-21 17:21 GMT

ಭೋಪಾಲ,ಮೇ 21: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ಮುಸ್ಲಿಮನೆಂಬ ಶಂಕೆಯಿಂದ ಬಿಜೆಪಿಯ ಪದಾಧಿಕಾರಿಯಿಂದ ಥಳಿಸಲ್ಪಟ್ಟಿದ್ದ ಭಂವರಲಾಲ್ (65) ಎನ್ನುವವರು ಕೆಲವೇ ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಆರೋಪಿ ಹಾಗೂ ಆತನ ಸಹಚರನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ನೆರೆಯ ರತ್ಲಾಮ್ ಜಿಲ್ಲೆಯ ಸಿರ್ಸಾ ಗ್ರಾಮದ ಸರಪಂಚರಾಗಿರುವ ಪಿಸ್ತಾಬಾಯಿ ಛತ್ತರ್ ಜೈನ್ ಅವರ ಹಿರಿಯ ಪುತ್ರ ಭಂವರಲಾಲ್ ಶವವು ಮೇ 19ರಂದು ರಾಮಪುರ ರಸ್ತೆಯಲ್ಲಿ ಪತ್ತೆಯಾಗಿತ್ತು. ಪಿಸ್ತಾಬಾಯಿ ರತ್ಲಾಮ್ ಜಿಲ್ಲೆಯಲ್ಲಿ ಅತ್ಯಂತ ಹಿರಿಯ ಸರಪಂಚರಾಗಿದ್ದಾರೆ.
ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದ ಭಂವರಲಾಲ್ ಮೇ 16ರಂದು ಕುಟುಂಬಿಕರೊಂದಿಗೆ ನೆರೆಯ ರಾಜಸ್ಥಾನದ ಚಿತ್ತೋಡಗಡ ಜಿಲ್ಲೆಯ ದೇವಸ್ಥಾನಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದರು. ಅವರ ಕುಟುಂಬವು ಮೇ 16ರಂದು ಅಲ್ಲಿ ಪೊಲೀಸ್ ನಾಪತ್ತೆ ದಾಖಲಿಸಿತ್ತು.

ಮೂರು ದಿನಗಳ ಬಳಿಕ ಭಂವರಲಾಲ್ ಶವವು ನೀಮಚ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು,ಅಪರಿಚಿತ ಶವ ಎಂದು ಮಾನಸಾ ಠಾಣಾ ಪೊಲೀಸರು ದಾಖಲಿಸಿಕೊಂಡು ಶವದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಸಂಬಂಧಿಕರು ಮಾನಸಾಕ್ಕೆ ಧಾವಿಸಿ ಶವದ ಗುರುತು ಹಿಡಿದಿದ್ದರು.

ಮರುದಿನ,ಅಂದರೆ ಶುಕ್ರವಾರ ಸಂಜೆ ಭಂವರಲಾಲ್‌ ರನ್ನು ಬಿಜೆಪಿ ನಾಯಕ ದಿನೇಶ್ ಕುಶ್ವಾಹ ಎಂಬಾತ ಮುಸ್ಲಿಮನೆಂದು ಶಂಕಿಸಿ ‘ನಿನ್ನ ಹೆಸರು ಮುಹಮ್ಮದ್ ಆಗಿದೆಯೇ ’ಎಂದು ಪ್ರಶ್ನಿಸುತ್ತ ಥಳಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಖುದ್ದು ಕುಶ್ವಾಹ ಸ್ವಚ್ಛ ಭಾರತ ಹೆಸರಿನ ವಾಟ್ಸ್ಆ್ಯಪ್ ಗುಂಪಿನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು,ಅಲ್ಲಿಂದ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವೀಡಿಯೊವನ್ನು ನೋಡಿದ ಭಂವರಲಾಲ್ ಕುಟುಂಬಿಕರ ದೂರಿನ ಮೇರೆಗೆ ಪೊಲೀಸರು ಕುಶ್ವಾಹ್ ಮತ್ತು ವೀಡಿಯೊವನ್ನು ಚಿತ್ರೀಕರಿಸಿದ್ದ ಆತನ ಸಹಚರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News