ಅಸ್ಸಾಂನಲ್ಲಿ ಪ್ರವಾಹ : ರೈಲ್ವೆ ಹಳಿಗಳ ಮೇಲೆ ವಾಸಿಸುತ್ತಿರುವ 500 ಕ್ಕೂ ಹೆಚ್ಚು ಕುಟುಂಬಗಳು

Update: 2022-05-21 08:04 GMT
ಸಾಂದರ್ಭಿಕ ಚಿತ್ರ, Photo: PTI

ಗುವಾಹಟಿ: ಪ್ರವಾಹದಿಂದ ತತ್ತರಿಸಿರುವ ಅಸ್ಸಾಂನ  ಜಮುನಾಮುಖ್ ಜಿಲ್ಲೆಯ ಎರಡು ಗ್ರಾಮಗಳ 500 ಕ್ಕೂ ಹೆಚ್ಚು ಕುಟುಂಬಗಳು ರೈಲ್ವೇ ಹಳಿಗಳ ಮೇಲೆ  ವಾಸಿಸುತ್ತಿದೆ ಎಂದು NDTV ವರದಿ ಮಾಡಿದೆ.

ರೈಲ್ವೆ ಹಳಿಯು ಪ್ರವಾಹದಲ್ಲಿ ಮುಳುಗದ ಏಕೈಕ ಎತ್ತರದ ಪ್ರದೇಶವಾಗಿದೆ.

ಚಾಂಗ್ಜುರೈ ಹಾಗೂ  ಪಾಟಿಯಾ ಪಥರ್ ಗ್ರಾಮದ ಜನರು ಪ್ರವಾಹದಲ್ಲಿ ತಮ್ಮಲ್ಲಿರುವ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಟಾರ್ಪಾಲಿನ್ ಶೀಟ್‌ಗಳಿಂದ ಮಾಡಿದ ತಾತ್ಕಾಲಿಕ ಡೇರೆಗಳ ಅಡಿಯಲ್ಲಿ ಆಶ್ರಯ ಪಡೆದಿರುವ ಗ್ರಾಮಸ್ಥರು, ಕಳೆದ ಐದು ದಿನಗಳಿಂದ ರಾಜ್ಯ ಸರಕಾರ ಹಾಗೂ  ಜಿಲ್ಲಾಡಳಿತದಿಂದ ಹೆಚ್ಚಿನ ಸಹಾಯ ಸಿಕ್ಕಿಲ್ಲ ಎಂದು ದೂರಿದ್ದಾರೆ.

ಪಾಟಿಯಾ ಪಥರ್ ಗ್ರಾಮದಲ್ಲಿನ ತನ್ನ  ಮನೆ ಪ್ರವಾಹದಲ್ಲಿ ನಾಶವಾದ ನಂತರ 43 ವರ್ಷದ ಮೊನ್ವಾರಾ  ಬೇಗಂ ಅವರು ತನ್ನ ಕುಟುಂಬದೊಂದಿಗೆ ತಾತ್ಕಾಲಿಕ ಡೇರೆಯಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹದಿಂದ ಬದುಕುಳಿಯಲು ಇತರ ನಾಲ್ಕು ಕುಟುಂಬಗಳು ಕೂಡ  ಅವರೊಂದಿಗೆ ಸೇರಿಕೊಂಡಿವೆ. ಅವರೆಲ್ಲರೂ ಒಂದೇ ಸೂರಿನಡಿ  ಅಮಾನವೀಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ, ಬಹುತೇಕರಿಗೆ ತಿನ್ನಲು  ಆಹಾರವೂ ಇಲ್ಲ.

"ಮೂರು ದಿನಗಳ ಕಾಲ ನಾವು ಬಯಲು ಪ್ರದೇಶದಲ್ಲಿದ್ದೆವು, ನಂತರ ನಾವು ಸ್ವಲ್ಪ ಹಣವನ್ನು ಸಾಲವಾಗಿ ತೆಗೆದುಕೊಂಡು ಈ ಟಾರ್ಪಾಲಿನ್ ಹಾಳೆಯನ್ನು ಖರೀದಿಸಿದ್ದೇವೆ. ನಾವು ಐದು ಕುಟುಂಬಗಳು ಒಂದೇ ಶೀಟ್ ಅಡಿಯಲ್ಲಿ ವಾಸಿಸುತ್ತಿದ್ದೇವೆ, ಯಾವುದೇ ಖಾಸಗಿತನವಿಲ್ಲ" ಎಂದು  ಬೇಗಂ ಹೇಳಿದರು.

ಬೊರ್ಡೊಲೊಯ್ ಅವರ ಕುಟುಂಬವೂ ಚಾಂಗ್ಜುರೈ ಗ್ರಾಮದಲ್ಲಿ ಮನೆ ಕಳೆದುಕೊಂಡು ಟಾರ್ಪಾಲಿನ್ ಶೀಟ್‌ನಲ್ಲಿ ವಾಸಿಸುತ್ತಿದೆ.

"ನಮ್ಮ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಬೆಳೆ ಪ್ರವಾಹದಲ್ಲಿ ನಾಶವಾಗಿದೆ. ಈ ರೀತಿ ಬದುಕುವುದು ತುಂಬಾ ಕಷ್ಟಕರವಾದ ಕಾರಣ ಪರಿಸ್ಥಿತಿ ಅನಿಶ್ಚಿತವಾಗಿದೆ" ಎಂದು ಅವರು NDTV ಗೆ ತಿಳಿಸಿದರು.

"ಇಲ್ಲಿನ ಪರಿಸ್ಥಿತಿಯು ಅತ್ಯಂತ ಸವಾಲಿನದ್ದಾಗಿದೆ, ಸುರಕ್ಷಿತ ಕುಡಿಯುವ ನೀರಿನ ಮೂಲವಿಲ್ಲ. ನಾವು ದಿನಕ್ಕೆ ಒಂದು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದೇವೆ. ಕಳೆದ ನಾಲ್ಕು ದಿನಗಳಿಂದ ನಾವು ಸ್ವಲ್ಪ ಅಕ್ಕಿಯನ್ನು ಮಾತ್ರ ಸ್ವೀಕರಿಸಿದ್ದೇವೆ" ಎಂದು ಸುನಂದಾ ಡೊಲೊಯ್ ಹೇಳಿದರು.

"ನಾವು ನಾಲ್ಕು ದಿನಗಳ ನಂತರ ನಿನ್ನೆ ಸರಕಾರದಿಂದ ಸಹಾಯ ಪಡೆದಿದ್ದೇವೆ. ಅವರು ನಮಗೆ ಸ್ವಲ್ಪ ಅಕ್ಕಿ, ಬೇಳೆ ಹಾಗೂ  ಎಣ್ಣೆಯನ್ನು ನೀಡಿದರು. ಆದರೆ ಕೆಲವರು ಅದನ್ನು ಸಹ ಸ್ವೀಕರಿಸಲಿಲ್ಲ" ಎಂದು ಪಾಟಿಯಾ ಪಥರ್‌ನ ಇನ್ನೊಬ್ಬ ಪ್ರವಾಹ ಸಂತ್ರಸ್ತರಾದ ರೆಹಮಾನ್ NDTV ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News