ಉತ್ತರಾಖಂಡ: ದಲಿತ ಮಹಿಳೆ ತಯಾರಿಸಿದ ಊಟವನ್ನು ಮತ್ತೊಮ್ಮೆ ಬಹಿಷ್ಕರಿಸಿದ ವಿದ್ಯಾರ್ಥಿಗಳು

Update: 2022-05-21 10:51 GMT

ಹೊಸದಿಲ್ಲಿ: ದಲಿತ ಮಹಿಳೆಯೊಬ್ಬರು ತಯಾರಿಸಿದ ಮಧ್ಯಾಹ್ನದ ಊಟವನ್ನು ‘ಮೇಲ್ವರ್ಗ’ದ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ ಕುರಿತು ಕಳೆದ ವರ್ಷ ಸುದ್ದಿ ಮಾಡಿದ್ದ ಉತ್ತರಾಖಂಡದ ಸರ್ಕಾರಿ ಶಾಲೆಯೊಂದು ಇತ್ತೀಚೆಗೆ ಅದೇ ವಿವಾದವನ್ನು ಪುನರಾವರ್ತನೆ ಮಾಡಿದೆ ಎಂದು Indianexpress.com ವರದಿ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಸುಖಿಧಾಂಗ್ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ದಲಿತ ಸಮುದಾಯಕ್ಕೆ ಸೇರಿದ ಸುನೀತಾ ಅವರನ್ನು ʼಭೋಜನ ಮಾತಾʼ ಆಗಿ ಹೊಸ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಶಾಲೆಯ ಮೇಲೆ ಹೇಗೆ ಒತ್ತಡ ಹೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

"ನಾನು ದಲಿತ ಸಮುದಾಯಕ್ಕೆ ಸೇರಿದವಳು ಎಂಬ ಕಾರಣಕ್ಕೆ ಮಕ್ಕಳಿಗೆ ಅಡುಗೆ ಮಾಡಬೇಡಿ ಎಂದು ಹೇಳಲಾಗಿತ್ತು. ಇದು ನನಗೆ ತುಂಬಾ ಅವಮಾನಕರವಾಗಿತ್ತು. ಆದರೆ ಅವರು (ಪೋಷಕರು) ತಮ್ಮ ಪಟ್ಟು ಸಡಿಸಲಿಲ್ಲ. ನನ್ನ ಕೆಲಸ ಮತ್ತು ಘನತೆಗೆ ನ್ಯಾಯ ಕೇಳಲು ನಾನು ಎಲ್ಲಿಯೂ ಹೋಗುವುದಿಲ್ಲ” ಎಂದು ಸುನೀತಾ ನಂತರ Thewire.in ಗೆ ತಿಳಿಸಿದ್ದರು.

ಶಾಲೆಯಲ್ಲಿ 230 ವಿದ್ಯಾರ್ಥಿಗಳಿದ್ದು, ಆ ಸಮಯದಲ್ಲಿ ಕಿರಿಯ ತರಗತಿಗಳಲ್ಲಿ ಓದುತ್ತಿದ್ದ 66 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿತ್ತು.

ವಿವಾದದ ನಂತರ ಚಂಪಾವತ್ ಜಿಲ್ಲೆಯ ಅಧಿಕಾರಿಗಳು ಆಕೆಯ ಸೇವೆಯನ್ನು ಕೊನೆಗೊಳಿಸಿದ್ದರು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿತ್ತು. ಅಂತಿಮವಾಗಿ, ಸುನೀತಾ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಿದಾಗ, ಅವರನ್ನು ಮರಳಿ ಕೆಲಸಕ್ಕೆ ನೇಮಿಸಲಾಗಿತ್ತು.

ಸುನೀತಾ ಅವರ ವೇತನ ತಿಂಗಳಿಗೆ 3,000 ರೂ. ಮಾತ್ರ ಇದೆ. ಈ ಕೆಲಸವು ಅವರ ಇಬ್ಬರು ಮಕ್ಕಳನ್ನು ಮತ್ತು ಅನಾರೋಗ್ಯ ಪೀಡಿತ, ನಿರುದ್ಯೋಗಿ ಪತಿಯನ್ನು ಪೋಷಿಸಲು ಸ್ಥಿರವಾದ ಆದಾಯ ಭರವಸೆಯಾಗಿತ್ತು. ಇದೀಗ ಸುಮಾರು ಏಳೆಂಟು ವಿದ್ಯಾರ್ಥಿಗಳು ಸುನೀತಾ ತಯಾರಿಸಿದ ಆಹಾರವನ್ನು ತಿನ್ನಲು ನಿರಾಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೆಲವು ವಿದ್ಯಾರ್ಥಿಗಳು ತಾವು ತಯಾರಿಸಿದ ಆಹಾರವನ್ನು ಬಹಿಷ್ಕರಿಸುತ್ತಿದ್ದಾರೆ ಎಂದು ಸುನೀತಾ ಸ್ವತಃ ಎಕ್ಸ್‌ಪ್ರೆಸ್‌ಗೆ ದೃಢಪಡಿಸಿದರು. ಆದರೆ ಅವರು ಇದರಿಂದ ತಲೆಕೆಡಿಸಿಕೊಂಡಿಲ್ಲ ಎಂದೂ ಹೇಳಿದರು. "ತಿನ್ನಲು ಸಿದ್ಧರಿರುವವರಿಗೆ ಮಾತ್ರ ಊಟವನ್ನು ಬೇಯಿಸಲು ನನ್ನೊಂದಿಗೆ ಹೇಳಲಾಗಿದೆ" ಎಂದು ಅವರು ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News