ಜಮ್ಮು ಕಾಶ್ಮೀರ: ನಿರ್ಮಾಣ ಹಂತದ ಸುರಂಗ ಕುಸಿತ; ಆರು ಮೃತದೇಹ ಪತ್ತೆ

Update: 2022-05-21 16:19 GMT

ಜಮ್ಮು,ಮೇ 21: ಜಮ್ಮು-ಕಾಶ್ಮೀರದ ರಾಮಬನದಲ್ಲಿ ಗುರುವಾರ ಕುಸಿದು ಬಿದ್ದಿದ್ದ ನಿರ್ಮಾಣ ಹಂತದ ಸುರಂಗದ ಅವಶೇಷಗಳಿಂದ ಇನ್ನೂ ಎರಡು ಶವಗಳನ್ನು ಶನಿವಾರ ಪತ್ತೆ ಹಚ್ಚಲಾಗಿದ್ದು, ಇದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ ಆರಕ್ಕೇರಿದೆ. ಶುಕ್ರವಾರ ಪ.ಬಂಗಾಳ ಮೂಲದ ಕಾರ್ಮಿಕನ ಶವವು ಪತ್ತೆಯಾಗಿತ್ತು.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದ ಭಾಗವೊಂದು ಕುಸಿದ ಬಳಿಕ ಅವಶೇಷಗಳಡಿ ಕನಿಷ್ಠ 10 ಕಾರ್ಮಿಕರು ಸಿಲುಕಿದ್ದು,ಪೊಲೀಸ್,ಸೇನೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಸಾಧ್ಯವಾದಷ್ಟು ಹೆಚ್ಚಿನ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶನಿವಾರ ಬೆಳಿಗ್ಗೆ ಘಟನಾ ಸ್ಥಳದಲ್ಲಿದ್ದ ರಾಮಬನ ಹಿರಿಯ ಎಸ್ಪಿ ಮೋಹಿತಾ ಶರ್ಮಾ ತಿಳಿಸಿದರು.
ರಾಮಬನ ಜಿಲ್ಲೆಯ ಖೂನಿ ನಲ್ಲಾ ಸಮೀಪ ಹೆದ್ದಾರಿಯಲ್ಲಿನ ನಿರ್ಮಾಣ ಹಂತದ ಸುರಂಗವು ಗುರುವಾರ ರಾತ್ರಿ 10:15ರ ಸುಮಾರಿಗೆ ಕೆಲಸ ಆರಂಭಗೊಂಡಾಗ ಕುಸಿದು ಬಿದ್ದಿತ್ತು. ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಪ್ರಾರಂಭಗೊಂಡಿತ್ತಾದರೂ ಮಾಕೇರ್ಕೋಟ ಪ್ರದೇಶದಲ್ಲಿಯ ಪರ್ವತದ ಭಾಗವೊಂದರಲ್ಲಿ ಭೂಕುಸಿತದಿಂದಾಗಿ ಗುಡ್ಡದಿಂದ ದೊಡ್ಡ ಮತ್ತು ಸಣ್ಣ ಬಂಡೆಗಳು ಉರುಳುತ್ತಿದ್ದರಿಂದ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರ ಕೆಲವು ಅವಧಿಗೆ ಸ್ಥಗಿತಗೊಂಡಿತ್ತು.

ಘಟನೆಯು ಅನಿರೀಕ್ಷಿತವಾಗಿತ್ತು ಮತ್ತು ಸುಮಾರು 17 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಗಳಿಗೆ ವ್ಯತ್ಯಯವುಂಟಾಗಿತ್ತು. ಎರಡು ಭಾರೀ ಯಂತ್ರಗಳೂ ಅವಶೇಷಗಳಡಿ ಸಿಲುಕಿವೆ. ಶನಿವಾರ ನಸುಕಿನಲ್ಲಿ ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ರಾಮಬನ ಅಭಿವೃದ್ಧಿ ಆಯುಕ್ತ ಮುಸರತ್ ಇಸ್ಲಾಮ್ ಸುದ್ದಿಸಂಸ್ಥೆಗೆ ತಿಳಿಸಿದರು.

ಪ.ಬಂಗಾಳದ ಐವರು,ಜಮ್ಮು-ಕಾಶ್ಮೀರದ ಇಬ್ಬರು,ಅಸ್ಸಾಮಿನ ಓರ್ವ ಹಾಗೂ ನೇಪಾಳ ಮೂಲದ ಇಬ್ಬರು ಸೇರಿದಂತೆ 10 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ.
ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರು ನಿಯಂತ್ರಣ ಕೊಠಡಿಯಿಂದ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News