ಪಾಕಿಸ್ತಾನದ ಐಎಸ್‌ಐಗೆ ಭಾರತೀಯ ಸೇನೆಯ ಮಾಹಿತಿ ಸೋರಿಕೆ: ಆರೋಪಿ ಸೈನಿಕ ಪ್ರದೀಪ್‌ ಕುಮಾರ್‌ ಸೆರೆ

Update: 2022-05-21 13:11 GMT

ಹೊಸದಿಲ್ಲಿ: ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ಭಾರತೀಯ ಸೇನಾ ಸಿಬ್ಬಂದಿ ಪ್ರದೀಪ್ ಕುಮಾರ್ ಎಂಬಾತನನ್ನು ಶನಿವಾರ ಬಂಧಿಸಲಾಗಿದೆ ಎಂದು Indiatoday ವರದಿ ಮಾಡಿದೆ. ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವ ಸಲುವಾಗಿ 24 ವರ್ಷದ ಸೇನಾ ಸಿಬ್ಬಂದಿಯನ್ನು ಪಾಕಿಸ್ತಾನಿ ಮಹಿಳೆ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಜೋಧ್‌ಪುರದಲ್ಲಿ ನೆಲೆಸಿದ್ದ ಕುಮಾರ್ ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದ. ತಾನು ಬೆಂಗಳೂರಿನ ಕಾರ್ಪೊರೇಟ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಹೆಸರು ಛದಮ್‌ ಎಂದು ಹೇಳಿಕೊಂಡು ಆತನ ಸಖ್ಯ ಬೆಳೆಸಿದ್ದಳು ಎನ್ನಲಾಗಿದೆ.

ಹಲವಾರು ತಿಂಗಳ ನಂತರ, ಕುಮಾರ್ ಮದುವೆಯ ನೆಪದಲ್ಲಿ ದಿಲ್ಲಿಗೆ ಬಂದು, ಅಲ್ಲಿನ ಬಂದರು ಮತ್ತು ಭಾರತೀಯ ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಕೇಳಿಪಡೆದಿದ್ದ ಎಂದು ವರದಿ ಉಲ್ಲೇಖಿಸಿದೆ. ಮಿಲಿಟರಿ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ಚಿತ್ರಗಳನ್ನು ಪಾಕಿಸ್ತಾನಿ ಮಹಿಳೆಗೆ ಕಳುಹಿಸಲಾಗಿದ್ದು, ಆಕೆ ಇಂಟರ್-ಸರ್ವೀಸ್ ಇಂಟೆಲಿಜೆನ್ಸ್ (ISI) ಗಾಗಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ.

ಕುಮಾರ್ ಮತ್ತು ಪಾಕಿಸ್ತಾನಿ ಮಹಿಳೆ ಆರು ತಿಂಗಳ ಹಿಂದೆ ವಾಟ್ಸಾಪ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News