ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣ: ಎಫ್‌ಬಿಐ ತನಿಖೆಗೆ ಅಮೆರಿಕ ಸಂಸದರ ಆಗ್ರಹ

Update: 2022-05-21 18:01 GMT

ವಾಷಿಂಗ್ಟನ್, ಮೇ 21: ಜೆರುಸಲೇಂನ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಲ್ ಜಝೀರಾ ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣದ ಬಗ್ಗೆ ಇಸ್ರೇಲ್ ತನಿಖೆ ನಡೆಸುವುದಾಗಿ ಹೇಳಿದ್ದರೂ ಎಫ್ಬಿಐಯ ತನಿಖೆಯನ್ನೂ ನಡೆಸುವಂತೆ ಅಮೆರಿಕದ 50ಕ್ಕೂ ಅಧಿಕ ಸಂಸದರು ಆಗ್ರಹಿಸಿದ್ದಾರೆ.ಶಿರೀನ್ ಅಮೆರಿಕದ ಪ್ರಜೆಯಾಗಿರುವುದರಿಂದ ಮತ್ತು ಅವರ ಹತ್ಯೆ ಪ್ರಕರಣದ ಬಗ್ಗೆ ಗೊಂದಲದ ಮಾಹಿತಿ ಇರುವುದರಿಂದ ವಿಷಯ ಸ್ಪಷ್ಟವಾಗಲು ಎಫ್ಬಿಐ (ಫೆಡರಲ್ ಇನ್ವೆಸ್ಟಿಗೇಷನ್ ಬ್ಯೂರೊ) ತನಿಖೆಯ ಅಗತ್ಯವಿದೆ ಎಂದು ಬಹುತೇಕ ಡೆಮೊಕ್ರಾಟ್ಸ್ ಸಂಸದರಿದ್ದ 57 ಸಂಸದ್ ಸದಸ್ಯರ ನಿಯೋಗ ಒತ್ತಾಯಿಸಿದೆ. ಅಮೆರಿಕದ ಪ್ರಜೆಯಾಗಿ, ಶಿರೀನ್ ವಿದೇಶದಲ್ಲಿ ವಾಸಿಸುವ ಅಮೆರಿಕನ್ ನಾಗರಿಕರಿಗೆ ಒದಗಿಸುವ ಪೂರ್ಣ ರಕ್ಷಣೆಗೆ ಅರ್ಹರಾಗಿದ್ದರು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ಎಫ್ಬಿಐ ನಿರ್ದೇಶಕ ಕ್ರಿಸ್ಟೋಫರ್ ವ್ರೇಯ್ಗೆ ಬರೆದಿರುವ ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.

ಸಂಸದರು ಪತ್ರ ಬರೆದಿರುವುದರಿಂದ ತೀವ್ರ ನಿರಾಶೆಯಾಗಿದೆ. ಅಮೆರಿಕ ವೀಕ್ಷಕನಾಗಿರುವ ಜಂಟಿ ತನಿಖೆ ನಡೆಸುವ ಬಗ್ಗೆ ನಾವು ಪೆಲೆಸ್ತೀನ್ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ ಅವರು ತಳ್ಳಿಹಾಕಿದ್ದಾರೆ. ಶಿರೀನ್ ಸಾವಿನ ಪ್ರಕರಣವನ್ನು ಇಸ್ರೇಲ್ ವಿರುದ್ಧದ ಅಪಪ್ರಚಾರಕ್ಕೆ ಬಳಸಿಕೊಳ್ಳುವ ಸಿನಿಕತನ ಪೆಲೆಸ್ತೀನ್ ಅಧಿಕಾರಿಗಳದ್ದಾಗಿದೆ ಎಂದು ಅಮೆರಿಕಕ್ಕೆ ಇಸ್ರೇಲ್ ರಾಯಭಾರಿ ಮೈಕೆಲ್ ಹೆರ್ಝಾಗ್ ಪ್ರತಿಕ್ರಿಯಿಸಿದ್ದಾರೆ. ಎಫ್ಬಿಐ ತನಿಖೆಗೆ ಆಗ್ರಹಿಸುವ ಬದಲು ಸಂಸದರು ಜಂಟಿ ತನಿಖೆಗೆ ಸಹಕರಿಸುವಂತೆ ಪೆಲೆಸ್ತೀನೀಯರ ಮೇಲೆ ಒತ್ತಡ ಹೇರಬೇಕು ಎಂದವರು ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News