ಐಪಿಎಲ್: ನಾಯಕ ರಿಷಭ್ ಪಂತ್ ಮಾಡಿದ ಪ್ರಮಾದಕ್ಕೆ ದೊಡ್ಡ ಬೆಲೆ ತೆತ್ತ ಡೆಲ್ಲಿ ಕ್ಯಾಪಿಟಲ್ಸ್

Update: 2022-05-22 14:16 GMT
photo:twitter

ಮುಂಬೈ: ಮುಂಬೈ ಇಂಡಿಯನ್ಸ್ ವಿರುದ್ಧ  5 ವಿಕೆಟ್‌ಗಳಿಂದ ಸೋತಿರುವ  ಐಪಿಎಲ್ ಪಂದ್ಯದಲ್ಲಿ  ಡಿಆರ್ ಎಸ್ ವಿಚಾರದಲ್ಲಿ ನಾಯಕ ರಿಷಬ್ ಪಂತ್ ಮಾಡಿದ  ಪ್ರಮಾದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಭಾರೀ ಬೆಲೆ ತೆರುವಂತಾಗಿದೆ.

ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಡೆಲ್ಲಿ ತಂಡಕ್ಕೆ ಮುಂಬೈ ವಿರುದ್ಧದ ತನ್ನ ಕೊನೆಯ ಲೀಗ್  ಪಂದ್ಯವನ್ನು ಗೆಲ್ಲುವ ಅಗತ್ಯವಿತ್ತು. ಡೆಲ್ಲಿ ಸೋತ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ.

ಮುಂಬೈನ ಬಿಗ್-ಹಿಟ್ಟರ್ ಟಿಮ್ ಡೇವಿಡ್ ವಿರುದ್ದದ ವಿಕೆಟ್ ಹಿಂಬದಿಯ ಕ್ಯಾಚ್ ಅನ್ನು  ಮರುಪರಿಶೀಲಿಸದಿರಲು ಪಂತ್ ಕೈಗೊಂಡ  ನಿರ್ಧಾರವು ಕ್ಯಾಪಿಟಲ್ಸ್ ಗೆ ತಿರುಗುಬಾಣವಾಯಿತು. ಏಕೆಂದರೆ ಡೇವಿಡ್  ಪಂದ್ಯದ ನಿರ್ಣಾಯಕ ಹಂತದಲ್ಲಿ 34 ಅಮೂಲ್ಯ ರನ್‌ಗಳನ್ನು ಸಿಡಿಸಿ ಮುಂಬೈ ಗೆಲುವಿಗೆ ಮುನ್ನಡಿ ಬರೆದಿದ್ದರು.

ದಕ್ಷಿಣ ಆಫ್ರಿಕಾದ ಬಿಗ್-ಹಿಟ್ಟರ್ ಡೆವಾಲ್ಡ್ ಬ್ರೆವಿಸ್ ಅವರ ಕ್ಯಾಚ್  ಅನ್ನು ಕೈಬಿಡುವ ಮೂಲಕ ಪಂತ್ ನಿರಾಸೆಗೊಳಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಅವರು 15 ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರೆವಿಸ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದರಿಂದ ಹೆಚ್ಚು ಹಾನಿಯಾಗದಂತೆ  ಖಚಿತಪಡಿಸಿಕೊಂಡರು.

ಬ್ರೆವಿಸ್ ಔಟಾದ ಬಳಿಕ  ಪವರ್-ಹಿಟ್ಟರ್ ಡೇವಿಡ್ ಬ್ಯಾಟಿಂಗ್‌ಗೆ  ಇಳಿದರು. ಶಾರ್ದೂಲ್ ಅವರು  ಆಫ್ ಸ್ಟಂಪ್‌ನ ಹೊರಗೆ  ಉತ್ತಮ ಎಸೆತವನ್ನು ಎಸೆದರು ಹಾಗೂ ಡೇವಿಡ್ ಚೆಂಡನ್ನು ಕವರ್‌ಗೆ ತಳ್ಳಲು ಪ್ರಯತ್ನಿಸಿದರು.  ಆಗ  ಸ್ಟಂಪ್ ಮೈಕ್ ಮೂಲಕ ಶಬ್ದ ಕೇಳಿಸಿತು. ವಿಕಟ್ ಕೀಪರ್ ಪಂತ್ ಸ್ಟಂಪ್ ಹಿಂದೆ ಚೆಂಡನ್ನು ಸುರಕ್ಷಿತವಾಗಿ ಕ್ಯಾಚ್ ಪಡೆದ ನಂತರ ತಕ್ಷಣವೇ ಔಟ್ ಗಾಗಿ ಮನವಿ ಮಾಡಿದರು.

ಆದರೆ ಮೈದಾನದ ಅಂಪೈರ್  ಮನವಿ ತಿರಸ್ಕರಿಸಿದರು.  ತನ್ನ ಬಳಿ ಎರಡು ರಿವೀವ್  ಅವಕಾಶ ಹೊಂದಿದ್ದ ನಾಯಕ ಪಂತ್ ಡಿಆರ್ ಎಸ್ ಮೊರೆ ಹೋಗುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಎಲ್ಲರಿಗೂ ಆಶ್ಚರ್ಯವಾಗುವಂತೆ ಬೌಲರ್ ಶಾರ್ದೂಲ್ ಠಾಕೂರ್ ಅವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿದ ನಂತರ ಪಂತ್  ಅವರು ಅಂಪೈರ್ ನಿರ್ಧಾರವನ್ನು ಪರಿಶೀಲಿಸದಿರಲು ನಿರ್ಧರಿಸಿದರು.

ನಿಮಿಷಗಳ ನಂತರ ಆಲ್ಟ್ರಾ ಎಡ್ಜ್ ನಲ್ಲಿ ಶಾರ್ದೂಲ್ ಎಸೆತವನ್ನು ಡೇವಿಡ್ ತನ್ನ ಬ್ಯಾಟ್ ನಿಂದ ಸವರಿದ್ದು  ಕಂಡುಬಂದಿತ್ತು. ಪಂತ್ ಅವರು ಅಂಪೈರ್  ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದ್ದರೆ  ಡೇವಿಡ್ ಶೂನ್ಯಕ್ಕೆ ಔಟಾಗುವ ಸಾಧ್ಯತೆಯಿತ್ತು.

ಕೇವಲ 11 ಎಸೆತಗಳಲ್ಲಿ 34 ರನ್ ಗಳಿಸಿದ ನಂತರ 18 ನೇ ಓವರ್‌ನಲ್ಲಿ ಶಾರ್ದೂಲ್‌ಗೆ ಔಟಾಗುವ ಮೊದಲು ಸಿಂಗಾಪುರದ  ಬ್ಯಾಟರ್ ಡೇವಿಡ್ ಮುಂದಿನ 9 ಎಸೆತಗಳಲ್ಲಿ ನಾಲ್ಕು ಬೃಹತ್ ಸಿಕ್ಸರ್ ಹಾಗೂ  ಎರಡು ಬೌಂಡರಿಗಳನ್ನು ಬಾರಿಸಿದರು. ಪಂತ್ ಪ್ರಮಾದಕ್ಕೆ ಕ್ಯಾಪಿಟಲ್ಸ್ ದೊಡ್ಡ ಬೆಲೆ ತೆರಬೇಕಾಯಿತು.

ಮುಂಬೈ ಅಂತಿಮವಾಗಿ ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆದ್ದುಕೊಂಡಿತು.  ಇದು ಡೆಲ್ಲಿ ಕ್ಯಾಪಿಟಲ್ಸ್ ಪಾಳಯವನ್ನು  ನಿರಾಶೆಗೊಳಿಸಿತು. ಆದರೆ ಈ ಫಲಿತಾಂಶಕ್ಕೆ ಡೆಲ್ಲಿ ತನ್ನನ್ನು ತಾನು ದೂಷಿಸಿಕೊಳ್ಲಬೇಕಾಯಿತು.

ಐಪಿಎಲ್  2022 ರ ಪ್ಲೇ-ಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳೆಂದರೆ:  ಗುಜರಾತ್ ಟೈಟಾನ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್  ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News