"ಜ್ಞಾನವಾಪಿ ಮಸೀದಿಯ ಒಳಗಡೆ ಶಿವಲಿಂಗ ಇಲ್ಲ, ಚುನಾವಣೆಗಾಗಿ ವದಂತಿ ಹರಡಲಾಗುತ್ತಿದೆ": ಎಸ್ಪಿ ಸಂಸದ ಶಫೀಖ್-ಉರ್ ರಹ್ಮಾನ್

Update: 2022-05-22 18:09 GMT

ಲಕ್ನೋ, ಮೇ 22: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಇರಲಿಲ್ಲ. 2024ರ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಕೆರಳಿಸಲು ಈ ವದಂತಿ ಹರಡಲಾಯಿತು ಎಂದು ಸಮಾಜವಾದಿ ಪಕ್ಷದ ಸಂಸದ ಶಫೀಕ್-ಉರ್ ರೆಹ್ಮಾನ್ ಬರ್ಕ್ ಅವರು ರವಿವಾರ ಹೇಳಿದ್ದಾರೆ. 2024ರ ಚುನಾವಣೆಗಳಿಗಾಗಿ ಈ ಎಲ್ಲ ವದಂತಿಗಳನ್ನು ಸೃಷ್ಟಿಸಲಾಗುತ್ತಿದೆ.

ಒಂದು ವೇಳೆ ನೀವು ಇತಿಹಾಸವನ್ನು ಶೋಧಿಸಿದರೆ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಅಥವಾ ಇನ್ಯಾವುದೂ ಸಿಗಲಾರದು. ಇದೆಲ್ಲವೂ ತಪ್ಪು ಎಂದು ಸಾಂಭಾಲ್ನ ಸಂಸದ ಬರ್ಕ್ ಅವರು ಹೇಳಿದ್ದಾರೆ. ಸಮಾಜವಾದಿ ಪಕ್ಷದ ಕಚೇರಿಯ ಹೊರಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬರ್ಕ್ ಅವರು ಇಲ್ಲಿ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು. ಅಯೋಧ್ಯೆ ಕುರಿತು ಮಾತನಾಡಿದ ಬರ್ಕ್, ರಾಮ ಮಂದಿರ ನಿರ್ಮಾಣವಾಗುತ್ತಿದ್ದರೂ ಅಲ್ಲಿ ಮಸೀದಿ ಇದೆ ಎಂದು ನಾನು ಈಗಲೂ ಹೇಳುತ್ತೇನೆ ಎಂದರು.

‘‘ನಮ್ಮನ್ನು ಗುರಿ ಮಾಡಲಾಗುತ್ತಿದೆ. ಮಸೀದಿಯ ಮೇಲೆ ದಾಳಿ ಮಾಡಲಾಗುತ್ತಿದೆ. ಸರಕಾರ ಈ ರೀತಿ ಕಾರ್ಯ ನಿರ್ವಹಿಸಬಾರದು. ಸರಕಾರ ಪ್ರಾಮಾಣಿಕತೆ ಹಾಗೂ ಕಾನೂನಿನ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕು. ಇಲ್ಲಿ ಬುಲ್ಡೋಜರ್ ನಿಯಮವಿದೆ. ಕಾನೂನು ಅಲ್ಲ’’ ಎಂದು ಬರ್ಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News