ರಶ್ಯದ ವಶದಲ್ಲಿರುವ 2,500 ಯುದ್ಧಕೈದಿಗಳ ಭವಿಷ್ಯದ ಬಗ್ಗೆ ಆತಂಕವಾಗಿದೆ: ಉಕ್ರೇನ್

Update: 2022-05-22 18:10 GMT

ಕೀವ್, ಮೇ 21: ಮುತ್ತಿಗೆ ಹಾಕಿರುವ ಮರಿಯುಪೋಲ್ ಬಂದರಿನಲ್ಲಿನ ಉಕ್ಕು ಸ್ಥಾವರದಲ್ಲಿದ್ದ ಸುಮಾರು 2,500 ಉಕ್ರೇನ್ ಯೋಧರನ್ನು ರಶ್ಯ ಯುದ್ಧಕೈದಿಗಳನ್ನಾಗಿ ಇರಿಸಿಕೊಂಡಿದ್ದು, ಇವರು ನ್ಯಾಯ ಮಂಡಳಿಯ ಎದುರು ವಿಚಾರಣೆಗೆ ಹಾಜರಾಗಬೇಕಿದೆ ಎಂದು ರಶ್ಯ ಬೆಂಬಲಿತ ಪ್ರತ್ಯೇಕತಾವಾದಿ ಮುಖಂಡರು ಹೇಳಿರುವ ಹಿನ್ನೆಲೆಯಲ್ಲಿ ಅವರ ಭವಿಷ್ಯದ ಬಗ್ಗೆ ಆತಂಕ ಹೆಚ್ಚಿದೆ ಎಂದು ಉಕ್ರೇನ್ ಸರಕಾರ ಹೇಳಿದೆ.ಅಝೋವ್‌ಸ್ತಲ್ ಉಕ್ಕು ಸ್ಥಾವರದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ರಶ್ಯ ಘೋಷಿಸಿದೆ. ಇದರೊಂದಿಗೆ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ನಲ್ಲಿ ಉಕ್ರೇನ್ ನ ದೃಢತೆಯ ಸಂಕೇತ ಎನಿಸಿದ್ದ ಉಕ್ಕು ಸ್ಥಾವರ ಈಗ ಪಾಳುಬಿದ್ದಿದ್ದು ಸ್ಮಶಾನ ಮೌನ ಆವರಿಸಿದೆ. ಸ್ಥಾವರದ ಸುತ್ತಮುತ್ತಲಿನ ಪ್ರದೇಶದ ಸುಮಾರು 20,000 ನಾಗರಿಕರು ರಶ್ಯದ ನಿರಂತರ ಬಾಂಬ್ ದಾಳಿಯಿಂದ ಮೃತಪಟ್ಟಿರುವ ಶಂಕೆಯಿದೆ.


ಅಝೋವ್‌ಸ್ತಲ್ ಉಕ್ಕು ಸ್ಥಾವರದಲ್ಲಿ ನೆಲೆಯಾಗಿದ್ದ 2,439 ಉಕ್ರೇನ್ ಯೋಧರು ಶರಣಾಗಿರುವ ವೀಡಿಯೊವನ್ನು ರಶ್ಯದ ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದೆ. ಇವರಿಗೆ ಯುದ್ಧಕೈದಿಗಳ ಹಕ್ಕನ್ನು ಒದಗಿಸಿ ಉಕ್ರೇನ್ ಗೆ ಮರಳಿಸಬೇಕು ಎಂದು ಶರಣಾಗಿರುವ ಯೋಧರ ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ರಶ್ಯ ವಶದಲ್ಲಿರುವ ಪ್ರತಿಯೊಬ್ಬ ಉಕ್ರೇನ್ ಯೋಧರ ಸುರಕ್ಷಿತ ಬಿಡುಗಡೆಗೆ ಉಕ್ರೇನ್ ಹೋರಾಡಲಿದೆ ಎಂದು ಉಕ್ರೇನ್ ಉಪಪ್ರಧಾನಿ ಇರಿನಾ ವೆರೆಸ್ಚುಕ್ ಹೇಳಿದ್ದಾರೆ.
ಶರಣಾಗಿರುವ ಯೋಧರಲ್ಲಿ ಕೆಲವು ವಿದೇಶಿ ಪ್ರಜೆಗಳೂ ಇದ್ದಾರೆ. ಎಲ್ಲರೂ ನ್ಯಾಯಾಲಯದ ವಿಚಾರಣೆ ಎದುರಿಸುವುದು ಖಚಿತ ಎಂದು ಪೂರ್ವ ಉಕ್ರೇನ್‌ನಲ್ಲಿ ರಶ್ಯ ಪರ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ಪ್ರದೇಶದ ಮುಖ್ಯಸ್ಥ ಡೆನಿಸ್ ಪುಷಿಲಿನ್ ಹೇಳಿದ್ದಾರೆ. ನ್ಯಾಯದ ಮರುಸ್ಥಾಪನೆಯಾಗಬೇಕು ಎಂದು ಆಶಿಸುತ್ತೇನೆ. ಜನಸಾಮಾನ್ಯರು, ಸಮಾಜ ಮತ್ತು ಬಹುಷಃ ಜಾಗತಿಕ ಸಮುದಾಯದ ವಿವೇಕಯುತ ಭಾಗದಿಂದ ಈ ನಿಟ್ಟಿನಲ್ಲಿ ಕೋರಿಕೆಯಿದೆ ಎಂದವರು ಹೇಳಿರುವುದಾಗಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ, ಅಝೋವ್‌ಸ್ತಲ್‌ನಲ್ಲಿ ಶರಣಾಗಿರುವ ಉಕ್ರೇನ್‌ನ ಯೋಧರನ್ನು ಉಕ್ರೇನ್ ವಶದಲ್ಲಿರುವ ರಶ್ಯದ ಉದ್ಯಮಿ, ಪುಟಿನ್ ಪರಮಾಪ್ತ ವಿಕ್ಟರ್ ಮೆಡ್ವೆಡ್ಚುಕ್ ಜತೆ ವಿನಿಮಯ ಮಾಡಿಕೊಳ್ಳುವ ಪ್ರಸ್ತಾವನೆ ಬಂದಿದೆ ಎಂದು ರಶ್ಯದ ಪ್ರಮುಖ ಸಂಸದ ಲಿಯೋನಿಡ್ ಸ್ಲಟ್ಸ್ಕಿ ಹೇಳಿದ್ದಾರೆ. ಬಳಿಕ ಈ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಅವರು, ಯುದ್ಧಕೈದಿಗಳ ಭವಿಷ್ಯವನ್ನು ನ್ಯಾಯಾಧೀಕರಣ ನಿರ್ಧರಿಸಬೇಕು ಎಂಬ ಪುಷಿಲಿನ್ ಅಭಿಪ್ರಾಯವನ್ನು ಒಪ್ಪುವುದಾಗಿ ಹೇಳಿದ್ದಾರೆ. ಮರಿಯುಪೋಲ್ ವಶಪಡಿಸಿಕೊಂಡು ಅಲ್ಲಿಂದ ಡೊನ್ಬಾಸ್ ವಲಯದ ಮೂಲಕ ಕ್ರಿಮಿಯಾ ಪರ್ಯಾಯ ದ್ವೀಪಕ್ಕೆ ಸೇತುವೆ ನಿರ್ಮಿಸುವುದು ರಶ್ಯದ ಕಾರ್ಯತಂತ್ರವಾಗಿದೆ. ಪೂರ್ವ ಉಕ್ರೇನ್ನ ಡೊನ್ಬಾಸ್ ವಲಯದಲ್ಲಿ ಭಾರೀ ಹೋರಾಟ ನಡೆಯುತ್ತಿರುವುದಾಗಿ ಉಕ್ರೇನ್ ಸೇನೆ ಹೇಳಿದೆ.

 ಈ ಮಧ್ಯೆ, ಪೋಲ್ಯಾಂಡ್ ಅಧ್ಯಕ್ಷ ಆಂಡ್ರೆರ್ ಡೂಡ ಉಕ್ರೇನ್‌ಗೆ  ಅನಿರೀಕ್ಷಿತ ಭೇಟಿ ನೀಡಿದ್ದು ರವಿವಾರ ಉಕ್ರೇನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕೆ ಉಕ್ರೇನ್ ನಡೆಸಿರುವ ಪ್ರಯತ್ನವನ್ನು ಬಲವಾಗಿ ಬೆಂಬಲಿಸುತ್ತಿರುವ ದೇಶಗಳಲ್ಲಿ ಪೋಲ್ಯಾಂಡ್ ಕೂಡಾ ಒಂದು. ಅಲ್ಲದೆ, ಉಕ್ರೇನ್ ಮೇಲೆ ರಶ್ಯ ಆಕ್ರಮಣ ಮಾಡಿದಾಗಿನಿಂದ ಉಕ್ರೇನ್ನಿಂದ ಗಡಿದಾಟಿ ಬಂದ ಮಿಲಿಯಾಂತರ ನಿರಾಶ್ರಿತರಿಗೆ ಪೋಲ್ಯಾಂಡ್ ನೆಲೆ ಒದಗಿಸಿದೆ. ಉಕ್ರೇನ್ನ ಬಂದರುಗಳನ್ನು ರಶ್ಯ ತಡೆದಿರುವುದರಿಂದ ಉಕ್ರೇನ್‌ಗೆ ಪಾಶ್ಚಿಮಾತ್ಯರಿಂದ ಒದಗಿಬರುವ ಮಾನವೀಯ ನೆರವು ಹಾಗೂ ಶಸ್ತಾಸ್ತ್ರಗಳು ಈಗ ಪೋಲ್ಯಾಂಡ್ ಬಂದರುಗಳ ಮೂಲಕ ಉಕ್ರೇನ್ ತಲುಪುತ್ತಿದೆ. ಅಲ್ಲದೆ, ಉಕ್ರೇನ್ನ ಆಹಾರ ಧಾನ್ಯ ಮತ್ತು ಕೃಷ್ಯುತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ರವಾನಿಸಲು ಪೋಲ್ಯಾಂಡ್ ನೆರವಾಗುತ್ತಿದೆ.

ಶರಣಾಗತಿಯಲ್ಲ: ಉಕ್ರೇನ್ ಸ್ಪಷ್ಟನೆ ಮರಿಯುಪೋಲ್ನ ಅಝೋವ್‌ಸ್ತಲ್ ಉಕ್ಕು ಸ್ಥಾವರದಲ್ಲಿದ್ದ ಉಕ್ರೇನ್ ಸೈನಿಕರು ಶರಣಾಗಿದ್ದಾರೆ ಎಂಬ ರಶ್ಯ ವಿದೇಶಾಂಗ ಇಲಾಖೆಯ ಹೇಳಿಕೆಯನ್ನು ಉಕ್ರೇನ್ ನಿರಾಕರಿಸಿದೆ. ಉಕ್ಕು ಸ್ಥಾವರದೊಳಗಿನ ಯೋಧರ ತುಕಡಿಗೆ ವಹಿಸಿಕೊಟ್ಟಿದ್ದ ಕಾರ್ಯ ಯಶಸ್ವಿಯಾದ ಬಳಿಕ ಅವರನ್ನು ಹೊರಬರುವಂತೆ ಸೂಚಿಸಲಾಗಿದೆ. ಇದು ಶರಣಾಗತಿಯಲ್ಲ, ಸಾಮೂಹಿಕ ಸ್ಥಳಾಂತರ ಎಂದು ಉಕ್ರೇನ್ ಸರಕಾರ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News