ಹಣದುಬ್ಬರ ನಿಯಂತ್ರಿಸಲು ಹೆಚ್ಚುವರಿಯಾಗಿ 2ಲ.ಕೋ.ರೂ.ವೆಚ್ಚಕ್ಕೆ ಸರಕಾರದ ಚಿಂತನೆ:‌ ವರದಿ

Update: 2022-05-22 18:37 GMT

ಹೊಸದಿಲ್ಲಿ,ಮೇ 22: ಹೆಚ್ಚುತ್ತಿರುವ ಬೆಲೆಗಳಿಂದ ಬಳಕೆದಾರರಿಗೆ ರಕ್ಷಣೆ ನೀಡಲು ಮತ್ತು ಬಹುವರ್ಷಗಳ ಅಧಿಕ ಹಣದುಬ್ಬರದ ವಿರುದ್ಧ ಹೋರಾಡಲು ಹಾಲಿ ವಿತ್ತವರ್ಷದಲ್ಲಿ ಹೆಚ್ಚುವರಿ ಎರಡು ಲ.ಕೋ.ರೂ.ಗಳನ್ನು ವೆಚ್ಚ ಮಾಡುವ ಬಗ್ಗೆ ಕೇಂದ್ರವು ಚಿಂತನೆ ನಡೆಸುತ್ತಿದೆ ಎಂದು ಇಬ್ಬರು ಸರಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ನೂತನ ಕ್ರಮಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದಾಗಿ ಸರಕಾರದ ಬೊಕ್ಕಸದ ಮೇಲೆ ಉಂಟಾಗಲಿರುವ ಒಂದು ಲ.ಕೋ.ರೂ.ಗಳ ಹೊರೆಯನ್ನು ದ್ವಿಗುಣಗೊಳಿಸಲಿವೆ ಎಂದು ಈ ಅಧಿಕಾರಿಗಳು ಹೇಳಿದರು.

ಕಳೆದ ಎಪ್ರಿಲ್ನಲ್ಲಿ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ಮತ್ತು ಸಗಟು ಬೆಲೆ ಸೂಚ್ಯಂಕವು 17 ವರ್ಷಗಳ ದಾಖಲೆ ಮಟ್ಟಕ್ಕೆ ಹೆಚ್ಚಿರುವುದು ಈ ವರ್ಷ ಹಲವಾರು ರಾಜ್ಯಗಳ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗಳಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ತಲೆನೋವನ್ನು ಹೆಚ್ಚಿಸಿದೆ.
 
‘ಹಣದುಬ್ಬರವನ್ನು ತಗ್ಗಿಸಲು ನಾವು ಸಂಪೂರ್ಣ ಗಮನವನ್ನು ನೀಡುತ್ತಿದ್ದೇವೆ. ಉಕ್ರೇನ್ ಬಿಕ್ಕಟ್ಟಿನ ಪರಿಣಾಮ ಊಹೆಗಿಂತ ಕೆಟ್ಟದ್ದಾಗಿದೆ ’ ಎಂದು ಓರ್ವ ಅಧಿಕಾರಿ ಹೇಳಿದರು.ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಪ್ರಸಕ್ತ ಅಂದಾಜು 2.15 ಲ.ಕೋ.ರೂ.ಗಳಿಗೆ ಹೆಚ್ಚುವರಿಯಾಗಿ 50,000 ಕೋ.ರೂ.ಗಳು ಅಗತ್ಯವಾಗುತ್ತವೆ ಎಂದು ಸರಕಾರವು ಅಂದಾಜಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

 ಕಚ್ಚಾತೈಲ ಬೆಲೆ ಏರಿಕೆ ಮುಂದುವರಿದರೆ ಇನ್ನೊಂದು ಸುತ್ತು ತೆರಿಗೆ ಕಡಿತವನ್ನೂ ಸರಕಾರವು ಮಾಡಬಹುದು ಮತ್ತು ಇದು 2022-23ನೇ ಸಾಲಿನಲ್ಲಿ ಸರಕಾರದ ಬೊಕ್ಕಸದ ಮೇಲೆ ಒಂದು ಲ.ಕೋ.ರೂ.ಗಳಿಂದ ಒಂದೂವರೆ ಲ.ಕೋ.ರೂ.ಗಳ ಹೊರೆಯನ್ನುಂಟು ಮಾಡಲಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದರು. ಈ ಕ್ರಮಗಳಿಗೆ ಹಣವನ್ನು ಒದಗಿಸಲು ಸರಕಾರವು ಮಾರುಕಟ್ಟೆಯಿಂದ ಹೆಚ್ಚುವರಿ ಸಾಲಗಳನ್ನು ಪಡೆಯುವುದು ಅಗತ್ಯವಾಗಬಹುದು ಮತ್ತು ಇದು 2022-23ನೇ ಸಾಲಿಗಾಗಿ ಜಿಡಿಪಿಯ ಶೇ.6.4ರ ತನ್ನ ಕೊರತೆ ಗುರಿಯನ್ನು ಸಾಧಿಸುವಲ್ಲಿ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದೂ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News