ಇಂಧನ ಸುಂಕ ಕಡಿತದಿಂದ ಕೇಂದ್ರಕ್ಕೆ 2.2 ಲಕ್ಷ ಕೋಟಿ ನಷ್ಟ: ನಿರ್ಮಲಾ ಸೀತಾರಾಮನ್

Update: 2022-05-23 02:50 GMT
ನಿರ್ಮಲಾ ಸೀತಾರಾಮನ್ (PTI)

ಹೊಸದಿಲ್ಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಎರಡು ಸುತ್ತು ಸೀಮಾ ಸುಂಕವನ್ನು ಕಡಿತಗೊಳಿಸಿದ ಕಾರಣದಿಂದ 2.2 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದ್ದು, ಇದನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳ ಜತೆ ಹಂಚಿಕೊಳ್ಳುವ ಲೆವಿಯನ್ನು ಭಾಗಶಃ ಕಡಿತಗೊಳಿಸಲಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.

"ಪೆಟ್ರೋಲ್ ಮೇಲಿನ ಸೀಮಾ ಸುಂಕವನ್ನು ಲೀಟರ್‍ಗೆ 8 ಲೀಟರ್ ಮತ್ತು ಡೀಸೆಲ್‍ಗೆ 6 ರೂಪಾಯಿ ಕಡಿತಗೊಳಿಸಿದ್ದು ಇಂದಿನಿಂದ ಇದು ಜಾರಿಗೆ ಬರಲಿದೆ. ಇದು ಸಂಪೂರ್ಣವಾಗಿ ರಸ್ತೆ ಮತ್ತು ಮೂಲಸೌಕರ್ಯ ಸೆಸ್‍ನ ಭಾಗವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. 2021ರ ನವೆಂಬರ್‍ನಲ್ಲಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್‍ಗೆ 5 ರೂಪಾಯಿ ಹಾಗೂ ಡೀಸೆಲ್‍ಗೆ 10 ರೂಪಾಯಿ ಕಡಿತಗೊಳಿಸಲಾಗಿತ್ತು. ಇದು ಕೂಡಾ ಆರ್‍ಐಸಿಯಿಂದ ಮಾಡಲಾದ ಕಡಿತ ಎಂದು ಟ್ವೀಟ್‍ನಲ್ಲಿ ಸ್ಪಷ್ಟಪಡಿಸಿದ್ದಾರೆ.

ರಸ್ತೆ ಮತ್ತು ಮೂಲಸೌಕರ್ಯ ಸೆಸ್‍ನಿಂದ ಬಂದ ಆದಾಯವನ್ನು ರಾಜ್ಯಗಳ ಜತೆ ಹಂಚಿಕೊಳ್ಳುವ ವ್ಯವಸ್ಥೆ ಇಲ್ಲ. ಹಣದುಬ್ಬರಕ್ಕೆ ಅಂಕುಶ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಇಂಧನ ತೆರಿಗೆ ಕಡಿತಗೊಳಿಸಿದ ಬಳಿಕ, ಕೇಂದ್ರದಿಂದ ಪಡೆಯುವ ರಾಜ್ಯಗಳ ಪಾಲು ಕಡಿಮೆಯಾಗಲಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದವು. ಕೇಂದ್ರದ ತೆರಿಗೆ ಆದಾಯದ ಪೈಕಿ ಶೇಕಡ 41ರಷ್ಟು ರಾಜ್ಯಗಳಿಗೆ ಸಿಗುತ್ತದೆ.

"ರಾಜ್ಯಗಳ ಜತೆ ಹಂಚಿಕೊಳ್ಳುವ ಮೂಲ ಸೀಮಾ ಸುಂಕವನ್ನು ಮುಟ್ಟುವುದಿಲ್ಲ" ಎಂದು ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಆದ್ದರಿಂದ ಎರಡು ಬಾರಿ ಸುಂಕ ಕಡಿತದ ಇಡೀ ಹೊರೆಯನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಶನಿವಾರ ಮಾಡಿದ ಘೋಷಣೆ ಪ್ರಕಾರ, ಆರ್‍ಐಸಿ ಮೊತ್ತ 13 ರೂಪಾಯಿಂದ 5 ರೂಪಾಯಿಗೆ ಹಾಗೂ ಡೀಸೆಲ್ ಮೇಲಿನ ಆರ್‍ಐಸಿ 8 ರೂಪಾಯಿಯಿಂದ 2 ರೂಪಾಯಿಗೆ ಇಳಿಯಲಿದೆ.

ಕೇಂದ್ರ ಸರ್ಕಾರ ಶನಿವಾರ ಮಾಡಿದ ಕಡಿತದಿಂದ ಒಂದು ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ. ನವೆಂಬರ್‍ನಲ್ಲಿ ಮಾಡಿದ ಸುಂಕ ಕಡಿತದಿಂದ 1.2 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ. ಇದರಿಂದಾಗಿ ವರ್ಷಕ್ಕೆ 2.2 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News