"ನನ್ನನ್ನು, ನನ್ನ ಕುಟುಂಬವನ್ನು ಅಶ್ಲೀಲವಾಗಿ ನಿಂದಿಸಲು ಅಂಧಭಕ್ತರು, ಗಂಧ್‌ಭಕ್ತರಿಗೆ ಪೇಮೆಂಟ್‌ ನೀಡಲಾಗುತ್ತಿದೆ"

Update: 2022-05-23 15:12 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಕೆಲ ನೀತಿಗಳ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸುಬ್ರಮಣಿಯನ್‌ ಸ್ವಾಮಿ ಪ್ರಧಾನಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. "ನನ್ನ ಮತ್ತು ನನ್ನ ಕುಟುಂಬವನ್ನು ಅಸಭ್ಯವಾಗಿ ನಿಂದಿಸಲು ಅಂಧಭಕ್ತರು ಮತ್ತು ಗಂಧಭಕ್ತರನ್ನು ಪೇಮೆಂಟ್‌ ನೀಡಿ ನೇಮಿಸಲಾಗಿದೆ" ಎಂದು ಅವರು ತಮ್ಮ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ. 

"ಟ್ವಿಟರ್‌ ನಲ್ಲಿ ನನ್ನ ಮತ್ತು ಪ್ರಧಾನಿ ಮೋದಿಯ ನಡುವಿನ ವ್ಯತ್ಯಾಸವೇನೆಂದರೆ ಅವರು ಹಿರೇನ್‌ ಜೋಶಿ, ಅಂಧಭಕ್ತರು ಮತ್ತು ಗಂಧಭಕ್ತರನ್ನು ಪಾವತಿಯ ಮೇಲೆ ನೇಮಿಸಿಕೊಂಡಿದ್ದಾರೆ. ಇಲ್ಲಿ ನಾನೇ ಟ್ವೀಟ್‌ ಮಾಡುತ್ತೇನೆ. ನನ್ನ ಟ್ವೀಟ್‌ ಗಳನ್ನು ಅಭಿಪ್ರಾಯ ವ್ಯತ್ಯಾಸಗಳಿಗೆ ಮಾತ್ರ ಸೀಮಿತಗೊಳಿಸುತ್ತೇನೆ ನಾವಿಬ್ಬರೂ ಅದನ್ನು ನಿಲ್ಲಿಸಬೇಕು ಅಥವಾ ಈ ವಿನಿಮಯ ಮುಂದುವರಿಯುತ್ತಲೇ ಇರುತ್ತದೆ" ಎಂದು ಅವರು ಹೇಳಿದ್ದಾರೆ. 

ಇನ್ನೊಂದು ಟ್ವೀಟ್‌ ನಲ್ಲಿ "ಈ ಅಂಧಭಕ್ತರು ಮತ್ತು ಗಂಧಭಕ್ತರ ಟ್ವಿಟರ್‌ ಅಕೌಂಟ್‌ ಹೆಸರಿನ ಜೊತೆಗೆ ಜೈಲಿನಲ್ಲಿರುವ ಖೈದಿಗಳ ಹಾಗೆ ಎಂಟು ಅಂಕೆಗಳನ್ನು ಯಾಕೆ ನಮೂದಿಸಿರುತ್ತಾರೆ? ಅದು ಪಾವತಿಗಾಗಿ ಪ್ರಧಾನಮಂತ್ರಿ ಕಚೇರಿಯ ಅಕೌಂಟ್‌ ನಂಬರ್.‌ ಎಂಟು ಅಂಕೆಗಳು ಸಾಮಾನ್ಯವಾಗಿ ಬ್ಯಾಂಕ್‌ ಖಾತೆಗಳಿರುತ್ತವೆ" ಎಂದು ಟ್ವೀಟಿಸಿದ್ದಾರೆ.

"ಈ ಮಕ್ಕಳು ವೈಯಕ್ತಿಕವಾಗಿ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುತ್ತಾರೆ. ಆದರೆ ನಾವು ಮೋದಿಯವರ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಎಳೆದುಕೊಂಡು ಬಂದು ಸೇಡು ತೀರಿಸಿಕೊಂಡರೆ ಟ್ವೀಟ್‌ಗಳು ಎಷ್ಟು ಅವಮಾನಕರವಾಗುತ್ತವೆ. ಆದ್ದರಿಂದ ಹಿರೇನ್ ಜೋಶಿ ತಮ್ಮ ದಾರಿತಪ್ಪಿ ಗುಂಪನ್ನು ನಿಯಂತ್ರಿಸಬೇಕು" ಎಂದು ಕಾಮೆಂಟ್‌ ಒಂದಕ್ಕೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News