ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆಂದು ಆರೋಪಿಸಲಾದ ಮೀನು ವ್ಯಾಪಾರಿಯ ಪತ್ನಿ, ಮಗಳನ್ನು ಬಂಧಿಸಿದ ಅಸ್ಸಾಂ ಪೊಲೀಸರು

Update: 2022-05-24 07:39 GMT
ಧ್ವಂಸಗೊಳಿಸಲಾದ ಮೃತ ಸಫೀಕುಲ್‌ ಇಸ್ಲಾಂ ಮನೆ. Photo: Rokibuz Zaman/Scroll.in

ಗುವಾಹಟಿ: ಮೀನು ವ್ಯಾಪಾರಿ ಸಫೀಕುಲ್ ಇಸ್ಲಾಂ ಅಸ್ಸಾಂನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಎರಡು ದಿನಗಳ ನಂತರ, ಪೊಲೀಸರು ಅವರ ಪತ್ನಿ ರಶೀದಾ ಖಾತುನ್ ಮತ್ತು ಅವರ ಮಗಳು 8 ನೇ ತರಗತಿ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ ಎಂದು Scroll.in ವರದಿ ಮಾಡಿದೆ.

ಬಟಾದ್ರಬಾ ಪೊಲೀಸ್ ಠಾಣೆಯನ್ನು ಸುಟ್ಟುಹಾಕಿದ ಆರೋಪದಲ್ಲಿ ಇಸ್ಲಾಂ ಅವರ ಪತ್ನಿ ಮತ್ತು ಮಗಳು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ನಾಗಾನ್ ಪೊಲೀಸ್ ಅಧೀಕ್ಷಕ ಲೀನಾ ಡೋಲಿ ಸೋಮವಾರ Scroll.in ಗೆ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಪೊಲೀಸರು ಒಂದು ಪ್ರಕರಣದಲ್ಲಿ ಕಾನೂನುಬಾಹಿರ (ಚಟುವಟಿಕೆಗಳು) ತಡೆ ಕಾಯಿದೆಯನ್ನು ಪ್ರಯೋಗಿಸಿದ್ದಾರೆ.

ಆರೋಪಿಗಳು ಬಾಂಗ್ಲಾದೇಶದ ನಿಷೇಧಿತ ಸಂಘಟನೆಯಾದ ಅನ್ಸಾರುಲ್ಲಾ ಬಾಂಗ್ಲಾ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 20 ರಂದು ಇಸ್ಲಾಂನನ್ನು ಬಂಧಿಸಲಾಗಿತ್ತು. ಆತನನ್ನು ಬಂಧನದಿಂದ ಬಿಡುಗಡೆ ಮಾಡಲು ಪೊಲೀಸರು ರೂ 10,000 ಮತ್ತು ಬಾತುಕೋಳಿಯನ್ನು ಲಂಚವಾಗಿ ಕೇಳುತ್ತಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿತ್ತು. ಕುಟುಂಬವು ಬಾತುಕೋಳಿಯನ್ನು ಮಾತ್ರ ನೀಡಲು ಶಕ್ತರಾಗಿರುವುದರಿಂದ ಅವರು ತನ್ನ ಪತಿಯನ್ನು ಹೊಡೆದು ಕೊಂದಿದ್ದಾರೆ ಎಂದು ಇಸ್ಲಾಂ ಅವರ ಪತ್ನಿ ರಶೀದಾ ಖಾತುನ್ ಆರೋಪಿಸಿದ್ದರು.

ಆದರೆ ಪೊಲೀಸರು, ಇಸ್ಲಾಂ ಅನಾರೋಗ್ಯದಿಂದ ಬಳಲುತ್ತಿದ್ದ ಮತ್ತು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮೇ 21 ರಂದು, ಸಫೀಕುಲ್‌ ಇಸ್ಲಾಂ ಮೃತಪಟ್ಟ ಸ್ವಲ್ಪ ಸಮಯದ ನಂತರ, ನಾಗಾಂವ್ ಜಿಲ್ಲೆಯ ಬಟಾದ್ರಬಾ ಪೊಲೀಸ್ ಠಾಣೆಗೆ ಗುಂಪೊಂದು ಬೆಂಕಿ ಹಚ್ಚಿತ್ತು. ಬಳಿಕ ಆರೋಪಿಗಳು ಎನ್ನಲಾದವರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು.

ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ಬಗ್ಗೆ ಪರಿಶೀಲಿಸಲು ನಾಗಾಂವ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸಫೀಕುಲ್ ಇಸ್ಲಾಂನ ಸಾವಿನ ಬಗ್ಗೆ ಕರ್ಬಿ ಆಂಗ್ಲಾಂಗ್ ಸಹಾಯಕ ಪೊಲೀಸ್ ಅಧೀಕ್ಷಕರು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News